ಜಿಲ್ಲೆ

ಚಿಂತನಾಶೀಲ ವಿದ್ಯಾರ್ಥಿಗಳೇ ವಿಶ್ವಮಾನವರು

ಎ.ಎಸ್.ಮಣಿಕಂಠ

ಚಾಮರಾಜನಗರ: ವಿದ್ಯಾರ್ಥಿಗಳು ವಿಸ್ತಾರವಾದ ಚಿಂತನೆಗಳ ಮೂಲಕ ಕುವೆಂಪುರವರ ವಿಶ್ವಮಾನವ ಚಿಂತನೆಯಂತೆ ಭವ್ಯ ಭಾರತದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಿ ಎಂದು ಚಂದ್ರಯಾನ -3 ಮಿಷನ್‌ನಲ್ಲಿ ಡೆಪ್ಯೂಟಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ಗ್ರೌಂಡ್ ಸೆಗ್ಮೆಂಟ್ ವಿಭಾಗದಲ್ಲಿ ಕೆಲಸ ಮಾಡಿ ಯಶಸ್ಸು ಪಡೆದ ಬೆಂಗಳೂರಿನ ಇಸ್ರೋ ವಿಜ್ಞಾನಿ ಎಂ.ಪಿ.ರೂಪಾ ಸಲಹೆ ನೀಡಿದರು.

ನಗರದ ಚೆನ್ನಿಪುರದ ಮೋಳೆ ರಸ್ತೆಯಲ್ಲಿರುವ ಸೇವಾಭಾರತಿ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶಶಿ ಸೌರಭ -2023 ಹಾಗೂ 37 ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮನುಷ್ಯ ಹುಟ್ಟುತ್ತಾ ವಿಶ್ವಮಾನವನಾಗಿ ಬೆಳೆಯುತ್ತಾ ಅಲ್ಪಮಾನವನಾಗುತ್ತಿದ್ದಾನೆ. ಹೀಗಾಗಿ ವಿಶಾಲವಾದ ದೃಷ್ಟಿಕೋನದಿಂದ ಯೋಚಿಸಿ ಮನು ಕುಲವೊಂದೆ ಎಂಬಂತೆ ಬದುಕಬೇಕು. ಕಳೆದ ಮೂರು ದಿನಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಉತ್ಸುಕತೆಯಿಂದ ಶಾರೀರಿಕ ಕಸರತ್ತು ಹಾಗೂ ಸಾಹಸ ಪ್ರದರ್ಶನ ನೀಡುತ್ತಿರುವುದು ಸಂತಸವಾಗಿದೆ. ದೈಹಿಕ ಬಲವರ್ಧನೆ ತೆಗೆ ಬೌದ್ದಿಕ ವಿಕಾಸ ಇದರಿಂದ ಸಾಧ್ಯ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲೂ ಹೆಚ್ಚಿನ ಆಸಕ್ತಿ ವಹಿಸಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಆರ್‌ಎಸ್‌ಎಸ್ ಕ್ಷೇತ್ರೀಯ ಕಾರ್ಯವಾಹ ಎನ್.ತಿಪ್ಪೇಸ್ವಾಮಿ ಮಾತನಾಡಿ, ಸೇವಾಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮವು ಧ್ಯೇಯ, ಸಮರ್ಪಣೆ,ಸಾಧನೆ ಈ ಮೂರರ ತ್ರಿವೇಣಿ ಸಂಗಮವಾಗಿದ್ದು ಸಂಸ್ಕಾರಯುತ ಶಿಕ್ಷಣದ ಮೂಲಕ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುತ್ತಿದೆ. ಆರ್‌ಎಸ್‌ಎಸ್ ಪ್ರಚಾರಕರಾಗಿ ಜೀವನವನ್ನು ಸಮಾಜದ ಸೇವೆಗಾಗಿ ಮುಡಿಪಾಗಿಟ್ಟ ಹರಿಭಾವು ವಝೆ ಹೆಸರನ್ನು ಕಾರ್ಯಕ್ರಮದ ವೇದಿಕೆಗೆ ಇಟ್ಟಿರುವುದು ಅರ್ಥಪೂರ್ಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜನಸೇವಾ ವಿದ್ಯಾ ಕೇಂದ್ರದ ಅಧ್ಯಕ್ಷ ಬೈಸಾನಿ ಶ್ರೀನಿವಾಸಗುಪ್ತಾ, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಸೇವಾಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮ.ವೆಂಕಟರಾಮು, ಸೇವಾಭಾರತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಾಸುದೇವರಾವ್, ಉಪಾಧ್ಯಕ್ಷ ಕೆ.ಬಾಲಸುಬ್ರಮಣ್ಯಂ, ಆಡಳಿತಾಧಿಕಾರಿ ರಮೇಶ್,ಖಜಾಂಚಿ ಮಂಜುನಾಥ್, ಆಡಳಿತ ಮಂಡಳಿ ಸದಸ್ಯ ಎಸ್.ಬಾಲಸುಬ್ರಮಣ್ಯಂ, ವೆಂಕಟನಾಗಪ್ಪಶೆಟ್ಟಿ, ಮುರುಗೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು.

ಸೇವಾಭಾರತಿ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಕೊನೆಯ ದಿನವಾದ ಭಾನುವಾರ ಶಾಲೆಯ ಶಿವಶಕ್ತಿ ಅಂಕಣದಲ್ಲಿ ಮೈನವರೇಳೆಸುವ ಸಾಹಸ ಪ್ರದರ್ಶನ,ಶಾರೀರಿಕ ಕಸರತ್ತು ನೋಡುಗರಿಗೆ ರಸದೌತಣ ನೀಡಿತು. ವಿದ್ಯಾರ್ಥಿಗಳು ರಿಂಗ್‌ನಲ್ಲಿ ಬೆಂಕಿ ಸಾಹಸ, ದೊಣ್ಣೆ ವರಸೆ, ಸೈಕಲ್ ಸಾಹಸ,ಏರೋಬಿಕ್ಸ್, ಶ್ರೀ ಚಾಮರಾಜೇಶ್ವರ ಕ್ಷೇತ್ರ ವೈಭವ, ಶಿವಪಾರ್ವತಿ ವೈಭವ,ಶಿವಾಜಿ ಸಾಹಸ, ಅಂಧಾಸುರ ವಧೆಗಳಂತಹ ಶಾರೀರಿಕ ಮತ್ತು ಸಾಹಸ ಪ್ರದರ್ಶನಗಳು ಎಲ್ಲರ ಹುಬ್ಬೇರಿಸಿ ರೋಮಾಂಚನಗೊಳಿಸಿತು.