ಜಿಲ್ಲೆ

ಸಮಾಜಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇವೆ ಅನನ್ಯ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ನಾಡಿಗೆ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇವೆ ಅಪಾರ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ಎ.ರಾಜೇಂದ್ರ ಪ್ರಸಾದ್ ಬಣ್ಣಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯ ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ವಿದ್ವಾಂಸಕರು, ಶಿಕ್ಷಣ ತಜ್ಞರು, ಇತಿಹಾಸಕಾರರು, ಸಾಮಾಜಿಕ ಕಾನೂನುಗಳ ಹರಿಕಾರರು ಎಂದು ಕರೆದಿದ್ದಾರೆ. ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರವಲ್ಲದೆ ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಟ್ಟು, 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭಿಸಿದ್ದರು. ಏಷ್ಯಾ ಖಂಡದಲ್ಲೇ ಮೊದಲ ಜಲವಿದ್ಯುತ್ ಯೋಜನೆ ಪ್ರಾರಂಭಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಅವರಿಗೆ ಸಲ್ಲುತ್ತದೆ. ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್ ಮಾತನಾಡಿ, ಮೈಸೂರು ಸಂಸ್ಥಾನದಲ್ಲಿ ಹಲವರು ಆಳ್ವಕೆ ನಡೆಸಿದ್ದಾರೆ. ಆದರೆ ನಾಲ್ವಡಿ ಅವರು ಜನಮಾನಸದಲ್ಲಿ ಉಳಿಯುವಂತ ಸಾಧನೆ ಮಾಡಿದ್ದಾರೆ. ಪ್ರಥಮ ಬಾರಿಗೆ ಎಲ್ಲ ಹಿಂದುಳಿದ ಸಮುದಾಯಗಳಿಗೆ ಶೇ.75ರಷ್ಟು ಮೀಸಲಾತಿ ನೀಡಲು ಆದೇಶ ಹೊರಡಿಸಿದರು. ಆ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಮೀಸಲಾತಿ ಜಕನ ಎಂದು ಕರೆಯುತ್ತಾರೆ ಎಂದರು.

ತಹಸೀಲ್ದಾರ್ ಐ.ಈ.ಬಸವರಾಜು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಸಂಸ್ಥಾನದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಿದ್ದರು. ಸಮಾಜದಲ್ಲಿನ ಅನಿಷ್ಟ ಪದ್ಧತಿಗಳ ನಿರ್ಮೂಲನೆಗಾಗಿ ಶ್ರಮಿಸಿದ್ದರು. ವೇಶ್ಯಾವೃತ್ತಿ ತಡೆಗಟುವ ಕಾಯ್ದೆ, ವಿಧವೆಯರಿಗೆ ಮರು ವಿವಾಹಮಾಡಿಕೊಳ್ಳುವ ಕಾಯ್ದೆ ಜಾರಿ ಸೇರಿದಂತೆ ಇತರ ಕ್ರಾಂತಿಕಾರಿ ಕಾನೂನುಗಳನ್ನು ಜಾರಿಗೆ ತಂದಿದ್ದು, ಇಂತಹವರನ್ನು ಸ್ಮರಿಸಿಕೊಳ್ಳವುದು ನಮ್ಮೆಲ್ಲರ ಕರ್ತವ್ಯ ಎಂದರು. ಸ
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಶೈಲಕುಮಾರ್, ಗೃಹ ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಎಸ್.ಮಹೇಶ್, ನಗರಸಭಾ ಮಾಜಿ ಸದಸ್ಯ ಗಣೇಶ್ ದೀಕ್ಷಿತ್, ಮಹಾಸಭಾದ ಗೌರವಾಧ್ಯಕ್ಷ ಶಾ.ಮುರಳಿ, ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜಗೋಪಾಲ್, ಸಹ ಕಾರ್ಯದರ್ಶಿ ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದರಾಜು, ನಾಗುರಮೇಶ್ ಹಾಜರಿದ್ದರು.