ಚಾಮರಾಜನಗರ: ಸೇವಾ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂಬುದೇ ಹೆಮ್ಮೆಯ ವಿಷಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋಮಧುಸೂದನ್ ಹೇಳಿದರು.
ನಗರದ ಚೆನ್ನಿಪುರದಮೋಳೆ ಬಡಾವಣೆ ಸಮೀಪದಲ್ಲಿರುವ ಸೇವಾ ಭಾರತಿ ಕಾಲೇಜು ಆವರಣದಲ್ಲಿ ಸೇವಾ ಭಾರತಿ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಶಶಿ ಸೌರಭ-2023 ಮತ್ತು 37ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ದೇಶಸೇವೆ, ಸಂಸ್ಕಾರ, ಶಿಸ್ತು ಹಾಗೂ ಪರಿಪೂರ್ಣ ಜೀವನದ ಮಾರ್ಗವನ್ನು ಕಲಿಸುವಲ್ಲಿ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಪಾತ್ರ ಅಪಾರವಾಗಿದೆ. ದೇಶದ ಹೆಮ್ಮೆಯ ಪ್ರಧಾನಿ, ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಸೈನಿಕರು ಹಾಗೂ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಉದ್ಯಮಿಗಳನ್ನು ಹುಟ್ಟುಹಾಕುವ ಹಾದಿಯಲ್ಲಿ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಸಾಗುತ್ತಿದೆ. ಅಂತಹ ವ್ಯಕ್ತಿಗಳನ್ನು ರೂಪಿಸುವ ವಾತಾವರಣವನ್ನು ಸಂಪೂರ್ಣವಾಗಿ ಶಾಲೆಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಜಿಲ್ಲೆಯ ಸೇವಾ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ 3 ಸಾವಿರಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಖುಷಿಯ ವಿಚಾರವಾಗಿದೆ. ಶಾಲೆಯಲ್ಲಿ ಕಿಂಡರ್ ಗಾರ್ಡನ್‌ನಿಂದ ಹಿಡಿದು ಸ್ನಾತಕೋತ್ತರ ಪದವಿಯ ವರೆಗೆ ಶಿಕ್ಷಣ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಚಾಮರಾಜನಗರಕ್ಕೆ ರಾಜಕಾರಣಿಗಳು, ಅಧಿಕಾರಿಗಳು ಬರಲು ಹಿಂದೇಟು ಹಾಕುತ್ತಿದ್ದರು. ಆದರೆ ಇಂದು ಎಲ್ಲವೂ ಬದಲಾಗಿದೆ. ಸಾಕಷ್ಟು ಜನರು ಇಲ್ಲಗೆ ಬರಲು ಕಾಯುತ್ತಿದ್ದಾರೆ. ಸೇವಾ ಭಾರತಿ ಶೀಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಕೆ.ಬಾಲಸುಬ್ರಮಣ್ಯಂ, ಮಾಜಿ ಮಂತ್ರಿ ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮುಖ್ಯ ಆಯುಕ್ತ ಟಿ.ಜಿ.ಆರ್.ಸಿಂಧ್ಯಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್, ಉದ್ಯಮಿ ಜಿ.ಆರ್.ಅಶ್ವತ್ಥನಾರಾಯಣ್, ಸಂಸ್ಥೆಯ ಹಿರಿಯ ವಿದ್ಯಾರ್ಥಿ ಪುನೀತ್ ಜಿ.ಕೂಡ್ಲೂರು ಹಾಗೂ ಇತರರು ಉಪಸ್ಥಿತರಿದ್ದರು.
ನೃತ್ಯಗಳ ಮೂಲಕ ರಂಜಿಸಿದ ಮಕ್ಕಳು:
ಸೇವಾಭಾರತಿ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ 2ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಭಿನ್ನ ನೃತ್ಯಗಳ ಮೂಲಕ ಮಕ್ಕಳು ನೆರೆದಿದ್ದವರನ್ನು ರಂಜಿಸಿದರು. ಸೇವಾಭಾರತಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಕನ್ನಡದ ಕಂಪು ಹರಡುವ ನೃತ್ಯ, ನರ್ಸರಿ ಶಾಲೆಯ ಪುಟಾಣಿಗಳ ಡೋಲಿ ಡೋಲು ಡಂಗೂರ ನೃತ್ಯ, ಸೇವಾ ಭಾರತಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಮೊಬೈಲ್ ಬಳಕೆ ಕುರಿತ ನಾಟಕ ನೋಡುಗರ ಗಮನಸೆಳೆಯಿತು. ಜೀಜಿಂಬೆ ಜೀಜಿಂಬೆ ನೃತ್ಯ, ಕೊಡವ ಹುಲಿ ಕುಣಿತ, ಕರ್ನಾಟಕ ಶೌರ್ಯ ಪರಂಪರೆ ಬಿಂಬಿಸುವ ನೃತ್ಯ ರೂಪಕ, ಭಾರತಾಂಬೆಯ ವೀರಪುತ್ರರ ಕುರಿತ ನೃತ್ಯ ಹಾಗೂ ಅಪ್ಪು ಅಮರ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.