ಜಿಲ್ಲೆ

ಮಂತ್ರಮಾಂಗಲ್ಯ ಮೂಲಕ ಎಡಿಸಿ ಮದುವೆ

ಚಾಮರಾಜನಗರ: ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದಾ ಅವರು ಸಂವಿಧಾನ ದಿನದ ಅಂಗವಾಗಿ ನ.26 ರಂದು ಮಂತ್ರಮಾಂಗಲ್ಯದ ಮೂಲಕ ಮದುವೆಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಚಾ.ನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಅವರು ಎಂ.ಆರ್.ಹರೀಶ್‌ಕುಮಾರ್ ಜತೆಗೆ ಕುವೆಂಪು ಆಶಯದಂತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗೀತಾ ಹುಡೇದಾ ಅವರು ಈ ಹಿಂದೆ ಯಳಂದೂರು ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದು, ಬಳಿಕ ಕೊಳ್ಳೇಗಾಲದ ಉಪವಿಭಾಗಾಧಿಕಾರಿಯಾಗಿ ಹಾಗೂ ಮಲೆ ಮಹದೇಶ್ವರಬೆಟ್ಟದ ಕಾರ್ಯದರ್ಶಿಯಾಗಿ ಹಾಗೂ ಗೃಹಮಂಡಳಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕರ್ತವ್ಯದಲ್ಲಿದ್ದು, ಅಬ್ಬರ ಆಡಂಬರದ ಮದುವೆಗಳು ಹೆಚ್ಚಾಗುತ್ತಿರುವ ಈಕಾಲಘಟ್ಟದಲ್ಲಿ ಓರ್ವ ಅಧಿಕಾರಿಯಾಗಿ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕುವೆಂಪು ಅವರ ಆಶಯಗಳಂತೆ ಸರಳವಾಗಿ ಮಂತ್ರಮಾಂಗಲ್ಯವಾಗುತ್ತಿರುವುದು ಉತ್ತಮ ನಡೆಯಾಗಿದೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಡಿಸಿ ಗೀತಾಹುಡೇದಾ ಮತ್ತು ಎಂ.ಆರ್.ಹರೀಶ್‌ಕುಮಾರ್ ಜತೆಗಿರುವ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಾಕಷ್ಟು ಜನರು ಇದು ಉತ್ತಮವಾದ ನಡೆ, ಆದರ್ಶವಾದ ಮಾರ್ಗ ಆಯ್ಕೆಮಾಡಿಕೊಂಡಿದ್ದಾರೆ. ಇಬ್ಬರ ವೈವಾಹಿಕ ಜೀವನಕ್ಕೆ ಶುಭಾಶಯ ಕೋರುವುದರ ಜತೆಗೆ ನೀವು ಇತರರಿಗೆ ಆದರ್ಶವಾಗಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.