ಚಾಮರಾಜನಗರ: ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವಲ್ಲಿ ಬೀದಿ ನಾಟಕ ಕಲಾವಿದರ ಪಾತ್ರ ಅಪಾರ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟ, ಜಿಲ್ಲಾ ಬೀದಿ ನಾಟಕ ಕಲಾತಂಡಗಳ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬೀದಿನಾಟಕ ಉತ್ಸವ, ಸಫ್ದರ್ ಹಶ್ಮಿ ಪ್ರಶಸ್ತಿ ಪ್ರಧಾನ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಬೀದಿ ನಾಟಕಗಳಿಗೆ ತನ್ನದೇ ಮಹತ್ವ ಸ್ಥಾನವಿದೆ. ಬೀದಿನಾಟಕ ಕಲಾವಿದರು ಸಮಾಜದಲ್ಲಿರುವ ಮೌಢ್ಯ ಹಾಗೂ ಕಂದಾಚಾರಗಳ ವಿರುದ್ದ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅವರನ್ನು ಕೇವಲ ತನ್ನ ಯೋಜನೆಗಳ ಅನುಷ್ಠಾನಕ್ಕೆ ಬಳಸಿಕೊಂಡು ಅವರನ್ನು ಮರೆತು ಬಿಡುವುದಲ್ಲಾ, ಬದಲಾಗಿ ಬೀದಿ ನಾಟಕ ಕಲಾವಿದರಿಗೆ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.
ಜಿಲ್ಲೆ ಜಾನಪದ ಕಲೆಗಳು ತವರೂರು, ಸಾವಿರಾರು ಕಲಾವಿದರು ಹಲವಾರು ಕಲೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಅನೇಕ ಹಿರಿಯ ಕಲಾವಿದರು ಕಿರಿಯ ಕಲಾವಿದರಿಗೆ ತಮ್ಮ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ. ಕಲೆಗೆ ತನ್ನದೇ ಆದ ಮಹತ್ವವಿದೆ. ಜಾನಪದ ಕಲೆಯನ್ನು ಪ್ರೋತ್ಸಾಹಿಸುವಂತೆ, ಬೀದಿನಾಟಕ ಕಲಾವಿದರನ್ನು ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯವಾಗಿದೆ. ಬೀದಿನಾಟಕಗಳು ಸಮಾಜದ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತಿದ್ದು, ಅವರಿಗೆ ಉತ್ತಮವಾದ ಅವಕಾಶಗಳನ್ನು ಕಲ್ಪಿಸಿಕೊಡಬೇಕು ಎಂದರು.
ರಾಜ್ಯ ಬೀದಿನಾಟಕ ಕಲಾತಂಡಗಳ ರಾಜ್ಯಾಧ್ಯಕ್ಷ ಪಿ.ಮಹೇಶ್ ಮಾತನಾಡಿ, ಬೀದಿ ನಾಟಕಕ್ಕೆ ಸುಮಾರು 40-50 ವರ್ಷಗಳ ಇತಿಹಾಸವಿದೆ. ಸರ್ಕಾರ ಬೀದಿ ನಾಟಕಕ್ಕೂ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕು ಎನ್ನುವ ಉದ್ದೇಶದಿಂದ 2019 ರಲ್ಲಿ ಬೀದಿ ನಾಟಕ ಒಕ್ಕೂಟವನ್ನು ರಚನೆ ಮಾಡಲಾಗಿದೆ. ರಾಜ್ಯದಲ್ಲಿ 500 ಕ್ಕೂ ಹೆಚ್ಚು ಬೀದಿನಾಟಕ ಕಲಾತಂಡಗಳಲ್ಲಿ, 12 ಸಾವಿರಕ್ಕೂ ಹೆಚ್ಚು ಕಲಾವಿದರು ಇದ್ದಾರೆ ಎಂದು ಹೇಳಿದರು
ಬೀದಿ ನಾಟಕ ಕಲಾವಿದರು ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಜಗತ್ತನ್ನು ಬದಲಾಯಿಸುವ ಶಕ್ತಿ ಬೀದಿ ನಾಟಕಗಳಿಗೆ ಇದೆ. ಸರ್ಕಾರ ಬೀದಿ ನಾಟಕ ಕಲಾವಿದರಿಗೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಬೇಕು. ಉತ್ತಮ ಸ್ಥಾನಮಾನ ಕೊಟ್ಟು ಅವರ ಬದುಕಿಗೆ ಆಸರೆಯಾಗಿ ಬೇಕು. ಬೀದಿ ನಾಟಕ ಅಕಾಡೆಮಿ ಸ್ಥಾಪಿಸಬೇಕು. ಕಲಾವಿದರ ಮಾಸಾಶನ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಂಗಾಯಣ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ, ರಂಗಕರ್ಮಿ ಕೆ.ಆರ್.ಸುಮತಿ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು), ಹಿರಿಯ ಕಲಾವಿದ ಗ್ಯಾರೆಂಟಿ ರಾಮಣ್ಣ, ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಪುರುಷೋತ್ತಮ್ ಹಾಗೂ ಇತರರು ಉಪಸ್ಥಿತರಿದ್ದರು.