ಚಾಮರಾಜನಗರ: ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರನ್ನು ಬದಲಾಯಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡ್ನಕೂಡು ಪ್ರಕಾಶ್ ಒತ್ತಾಯಿಸಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಘಟನೆ ನಡೆದಿದ್ದು, ಸೌಜನ್ಯಕ್ಕಾದರೂ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ. ದಡದಹಳ್ಳಿಯ ದಲಿತ ಯುವಕನ ಹತ್ಯೆ ನಡೆದಾಗಲೂ ಭೇಟಿ ನೀಡಿಲ್ಲ. ಮಹರ್ಷಿ ವಾಲ್ಮೀಕಿ ಜಯಂತಿಗೂ ಬರದೇ ತುಂಬಾ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಈ ವರೆಗೂ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಈ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕು ಎಂದು ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಾಂಗ್ರೆಸ್ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಜೋಕರ್ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪಾತ್ರ ಅಪಾರವಾಗಿದೆ. ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಸಾಕಷ್ಟು ಬಾರಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ದಲಿತ ಸಮುದಾಯವನ್ನು ವಂಚಿಸುತ್ತಾ ಬಂದಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಲೇ ಕಾಂಗ್ರೆಸ್ ದಲಿತ ಮತಗಳನ್ನು ಸೆಳೆದುಕೊಳ್ಳಲು, ಖರ್ಗೆ ಅವರನ್ನು ಜಿಲ್ಲೆಗೆ ಕರೆಯಿಸಿ ಅಭಿನಂದಿಸುವ ಪ್ರಯತ್ನ ಮಾಡುತ್ತಿದ್ದಾರೆ. ಖರ್ಗೆ ಅವರ ಮೇಲೆ ಅಷ್ಟೊಂದು ಅಭಿಮಾನವಿದ್ದರೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ೋಷಿಸಲಿ ಎಂದು ಸವಾಲು ಹಾಕಿದರು.
ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರೇವಣ್ಣ, ಪದ್ಮ, ಎಸ್ಸಿ ಮೋರ್ಚಾ ಹನೂರು ತಾಲೂಕು ಅಧ್ಯಕ್ಷ ರಾಜಶೇಖರ್, ಮುಖಂಡ ಹೊಂಗನೂರು ಮಹದೇವಸ್ವಾಮಿ ಹಾಜರಿದ್ದರು.