ಜಿಲ್ಲೆ

ಕೃಷಿಕಾಯ್ದೆ ವಿರೋಧಿಗೆ ಒತ್ತಾಯಿಸಿ ಮಹಾಧರಣಿ

ಎ.ಎಸ್.ಮಣಿಕಂಠ

ಚಾಮರಾಜನಗರ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ರಾಜ್ಯ ಸರ್ಕಾರದ ರೈತವಿರೋಧಿ ಕಾಯ್ದೆಗಳ ರದ್ದತಿಗಾಗಿ ಒತ್ತಾಯಿಸಿ ನ.26 ರಿಂದ 28 ರವರೆಗೆ ಮಹಾಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯರೈತಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ರೈತಸಂಘ, ಹಸಿರು ಸೇನೆ, ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆಯ ಮೇರೆಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವುಗಳನ್ನು ಖಂಡಿಸಿ ನ.26 ರಿಂದ 28 ರವರೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ 72 ಗಂಟೆಗಳ ಕಾಲ ಮಹಾಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ದೆಹಲಿಯಲ್ಲಿ ಸುಮಾರು 13 ತಿಂಗಳು ರೈತರು ಐತಿಹಾಸಿಕ ಹೋರಾಟ ನಡೆಸಿದ ಪರಿಣಾಮ ಕೇಂದ್ರ ಸರ್ಕಾರ ರೈತವಿರೀಧಿ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಿತು. ಆದರೂ ಕನಿಷ್ಠ ಬೆಂಬಲ ಬೆಲೆ ಕಾಯ್ದೆ, ವಿದ್ಯುತ್ ತಿದ್ದುಪಡಿ ಮಸೂದೆ ರದ್ದತಿ ಮುಂತಾದ ವಿಷಯಗಳಲ್ಲಿ ರೈತರಿಗೆ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಲ್ಲಿ ವಿಲವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರೈತವಿರೀಧಿ ಕೃಷಿ ಕಾಯ್ದೆಗಳನ್ನು ಪಾಪಸ್ ಪಡೆಯುವುದು, ವಿದ್ಯುತ್ ಕಾಯ್ದೆ ಖಾಸಗೀಕರಣ ಮಾಡುತ್ತಿರುವುದು, ರೈತರಿಗೆ ಬರಪರಿಹಾರ ಧನ ವಿತರಣೆ ಮಾಡದೇ, ರೈತರ ಐಪಿ ಸೆಟ್‌ಗಳಿಗೆ ಮೂಲ ಸೌಕರ್ಯವನ್ನು ಸ್ವಯಂ ವೆಚ್ಚದಿಂದ ಮಾಡಿಕೊಳ್ಳುವಂತೆ ಸೂಚನೆ ನೀಡಿರುವುದು ರೈತರನ್ನು ಸಂಕಷ್ಟಕ್ಕೆ ನೂಕಿದೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ರೈತ ವಿರೋಧಿಯಾಗಿದ್ದು, ಕಾರ್ಮಿಕರಿಗೆ ದುಡಿಯುವ ಅವಧಿಯನ್ನು ಹೆಚ್ಚಳಮಾಡಿ ಕಾರ್ಮಿಕ ವಿರೋಧಿಯಾಗಿದೆ. ರಾಜ್ಯ ಸರ್ಕಾರ ತಾವು ಜಾರಿಮಾಡಿರುವ ಗ್ಯಾರೆಂಟಿ ಯೋಜನೆಗಳ ಭ್ರಮೆಯಲ್ಲಿ ತೇಲಾಡುತ್ತಿದೆ. ಈ ಕಾರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿವಿಧ ಹಕ್ಕೋತ್ತಾಯಗಳನ್ನು ಮಂಡಿಸುವ ಸಲುವಾಗಿ ಮಹಾಧರಣಿಯನ್ನು ಆಯೋಜಿಸಿದ್ದು, ರೈತರು, ಕೂಲಿಕಾರ್ಮಿಕರು, ಮಹಿಳೆಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಧರಣಿಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ರಾಜ್ಯ ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ಅಖನಿ ಶಿವಪ್ಪ, ಉಪಾಧ್ಯಕ್ಷ ತರೀಕೆರೆ ಎಂ.ಮಹೇಶ್ ಹಾಜರಿದ್ದರು.