ಚಾಮರಾಜನಗರ: ನಮ್ಮ ನಾಡು-ನುಡಿ, ನಮ್ಮ ಜಿಲ್ಲೆ ಎಂಬ ಗೌರವವನ್ನು ಇಟ್ಟುಕೊಂಡು ಜನರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಪ್ರಯತ್ನಿಸುತ್ತೇನೆ ಎಂದು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ವತಿಯಿಂದ ಕರ್ನಾಟಕ ಏಕೀಕರಣ ಮಹೋತ್ಸವ, ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮ ಅಂಗವಾಗಿ ಗುರುವಾರ ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಚಾಮರಾಜನಗರ ಜಿಲ್ಲಾಧಿಕಾರಿ ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ. ನಾನು ಅಧಿಕಾರ ವಹಿಸಿಕೊಂಡು 4 ತಿಂಗಳಾಗಿದೆ, ಆದರೆ 4 ವರ್ಷಗಳಷ್ಟು ಜನರು ಪ್ರೀತಿ ನೀಡಿದ್ದಾರೆ. ಇಲ್ಲಿನ ಕನ್ನಡಪರ, ರೈತ ಹಾಗೂ ಇನ್ನಿತರೆ ಸಂಘಟನೆಗಳು ಜನಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ನಾಡು-ನುಡಿ, ನೆಲ-ಜಲ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಿಮ್ಮ ಸಹಕಾರ ಈಗೆಯೇ ಇರಲಿ. ಈ ಮೂಲಕ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತಂದು, ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ಕೆಲಸ ಮಾಡಬೇಕಿದೆ ಎಂದರು.
ಇದೇ ಮಣ್ಣಿನಲ್ಲಿ ಜನಿಸಿ ನಮ್ಮ ಜನರಿಗೆ ಸೇವೆ ಮಾಡುವಂತವ ಅವಕಾಶ ದೊರಕಿರುವುದೇ ಪುಣ್ಯ.
ನನ್ನ ಅವಧಿಯಲ್ಲಿ ಜನರಿಗೆ ಸಾಧ್ಯವಾದಷ್ಟು ಅನುಕೂಲವಾಗುವ ದೃಷ್ಟಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಬೇಕಿದೆ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಅಳಿಸಿಹಾಕಿ ಶಿಕ್ಷಣ, ಜಿಲ್ಲೆಯ ಯುವಕರಿಗೆ ಉದ್ಯೋಗ ಸೃಷ್ಟಿ, ಉತ್ತಮ ಆರೋಗ್ಯ ಸೇವೆ ಹಾಗೂ ಇನ್ನಿತರೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಈ ಮೂಲಕ ಜನಸ್ನೇಹಿ ಆಡಳಿತಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೋರಾಟಗಾರ ಚಾ.ರಂ.ಶ್ರೀನಿವಾಸ್ ಗೌಡ ಮಾತನಾಡಿ, 1956 ಕರ್ನಾಟಕ ಏಕೀಕರಣ ಸಮಿತಿ ರಚನೆಯಾಯಿತು. ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ ನಡೆಯಿತು. ಕರ್ನಾಟಕ ಏಕೀಕರಣಕ್ಕೆ ಬಹುದೊಡ್ಡ ಹೋರಾಟವೇ ನಡೆದಿದೆ. ಪ್ರಸ್ತುತ ಕೆಂಗಲ್ ಹನುಮಂತಯ್ಯ ಮತ್ತು ನಿಜಲಿಂಗಪ್ಪ ಹಾಗೂ ಅನೇಕ ಸಾಹಿತಿಗಳನ್ನು ನೆನಪು ಮಾಡಿಕೊಳ್ಳಬೇಕು. ಹಲವು ಮಹನೀಯರ ಹೋರಾಟದ ಫಲವಾಗಿ ರಾಜ್ಯ ರೂಪುಗೊಂಡಿದೆ. ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಸುಚಿಸಿದ ಸುವರ್ಣ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಣೆ ಮಾಡೋಣ ಎಂದರು.
ಈ ವೇಳೆ ಚಾಮರಾಜನಗರ ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರುಳಿ, ಅಬಕಾರಿ ಉಪ ಆಯುಕ್ತ ನಾಗಸೇನಾ, ವಾಣೀಜ್ಯ ಮತ್ತು ಕೈಗಾರಿಕೆ ಇಲಾಖೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ್, ನಗರಸಭೆ ಪೌರಾಯುಕ್ತ ರಾಮದಾಸ್, ರೋಟರಿ ಸಂಸ್ಥೆ ಅಧ್ಯಕ್ಷ ಸಿ.ಎನ್.ಚಂದ್ರಪ್ರಭಾ ಜೈನ್, ಕಾರ್ಯದರ್ಶಿ ಅಬ್ದುಲ್ ಅಜೀಜ್, ನಿಜಧ್ವನಿ ಗೋವಿಂದರಾಜು, ರಾಜ್ ಗೋಪಾಲ್, ಪುಣ್ಯದಹುಂಡಿ ರಾಜು, ಗಣೇಶ್ ದಿಕ್ಷೀತ್, ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹಾಗೂ ಇತರರು ಉಪಸ್ಥಿತರಿದ್ದರು.