ಜಿಲ್ಲೆ

ಬರ ಅಧ್ಯಯನಕ್ಕೆ ಯತ್ನಾಳ್ ಯತ್ನ

ಎ.ಎಸ್.ಮಣಿಕಂಠ

ಚಾಮರಾಜನಗರ: ಮಳೆ ಇಲ್ಲದೇ ಬೆಳೆ ಕೈತಪ್ಪಿದೆ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಇರುವ ಬೆಳೆಯೂ ಒಣಗುತ್ತಿದೆ, ಚಿರತೆ ಹಾವಳಿ ಹಾಗೂ ಇನ್ನಿತರೆ ಸಮಸ್ಯೆಗಳ ನಡುವೆ ಕೃಷಿಕರು ಬದುಕು ದೂಡುವುದೇ ದುಸ್ಥರವಾಗಿದೆ.

ಜಿಲ್ಲೆಯಲ್ಲಿ ಬರಪರಿಸ್ಥಿತಿ ಅಧ್ಯಯನ ಮಾಡಲು ಸೋಮವಾರ ಭೇಟಿ ನೀಡಿದ್ದ ಕೇಂದ್ರದ ಮಾಜಿ ಸಚಿವ ಮತ್ತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿ ಮುಖಂಡರ ಜತೆಗೆ ರೈತರು ತಮ್ಮ ಸಂಕಷ್ಟಗಳನ್ನು ಹಂಚಿಕೊಂಡ ಬಗೆ ಇದು.

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಿಳಲೀಪುರ, ಕುಲಗಾಣ, ಸೀಗೆವಾಡಿ, ಮೂಡ್ನಾಕೂಡು ಮತ್ತು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬ್ಯಾಡರಪುರ, ಹೆಗ್ಗೋಠಾರ ಗ್ರಾಮಗಳ ಹಲವು ರೈತರ ಜಮೀನುಗಳಿಗೆ ಭೇಟಿ ನೀಡಿದ ಅಧ್ಯಯನ ತಂಡ ಸಮಗ್ರವಾಗಿ ಪರಿಶೀಲನೆ ನಡೆಸಿ ರೈತರಿಂದ ಮಾಹಿತಿ ಕಳೆ ಹಾಕಿದರು. ರೈತರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬಾಳೆ, ಕಡ್ಲೇಕಾಯಿ, ಟೊಮೋಟೊ, ಹತ್ತಿ, ಸೇವಂತಿಗೆ ಹೂ ಹಾಗೂ ಇನ್ನಿತರೆ ಬೆಳೆಗಳನ್ನು ವೀಕ್ಷಿಸಿ ಬೆಳೆಹಾನಿಯ ಕುರಿತು ಪರಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ರೈತರು ಮಳೆ ಇಲ್ಲದೇ ಬೆಳೆ ಒಣಗಿರುವುದು, ಕೃಷಿ ಪಂಪ್‌ಸೆಟ್‌ಗಳಿಗೆ ಸೂಕ್ತ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡದೇ ಇರುವುದು, ಬೆಳೆ ಪರಿಹಾರ, ಕೃಷಿ ಸಾಲಸೌಲಭ್ಯ, ಕಾಡು ಪ್ರಾಣಿಗಳ ಹಾವಳಿ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಬಿಜೆಪಿ ಅಧ್ಯಯನ ತಂಡದ ಅರಿವಿಗೆ ತಂದರು. ರೈತರ ಸಮಸ್ಯೆಗಳನ್ನು ಆಲಿಸಿದ ಬರ ಅಧ್ಯಯನ ತಂಡದಲ್ಲಿದ್ದ ಬಿಜೆಪಿ ಮುಖಂಡರು ಸರ್ಕಾರದಿಂದ ಬೆಳೆ ಪರಿಹಾರ ಬಂದಿದೆಯೇ, ಇಲ್ಲವೇ ಎಂದು ಪ್ರಶ್ನಿಸಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲಿ ನಿಮ್ಮ ಸಮಸ್ಯೆಗಳನ್ನು ಚರ್ಚಿಸುವ ಮೂಲಕ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ಬರ ಪರಿಸ್ಥಿತಿಯ ವಾಸ್ತವಾಂಶವನ್ನು ತಿಳಿಸಲಾಗುವುದು ರೈತರ ಸಂಕಷ್ಟಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ವಿಜಯ್ ಶಂಕರ್, ಮೈಸೂರು ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕರಾದ ಎನ್.ಮಹೇಶ್, ಎಸ್.ಬಾಲರಾಜ್, ಸಿ.ಎಸ್.ನಿರಂಜನ್‌ಕುಮಾರ್, ಬಿ.ಹರ್ಷವರ್ಧನ್, ಡಾ.ನವೀನ್‌ಕುಮಾರ್, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ, ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ಅಯ್ಯನಪುರ ಶಿವಕುಮಾರ್, ಎಸ್ಸಿಮೋರ್ಚಾ ಅಧ್ಯಕ್ಷ ಮೂಡ್ನಕೂಡು ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಮುತ್ತಿಗೆ ಮೂರ್ತಿ ಹಾಗೂ ಇತರರು ಹಾಜರಿದ್ದರು.

ಸಂಕಷ್ಟಗಳ ಅನಾವರಣ:
ಜಿಲ್ಲೆಯ ಬರಪರಿಸ್ಥಿತಿ ಅಧ್ಯಯನ ಮಾಡಲು ಬಂದಿದ್ದ ಬಿಜೆಪಿ ತಂಡದ ಮುಂದೆ ರೈತರು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೀಳಲಿಪುರ ಗ್ರಾಮದ ಗುರುಸ್ವಾಮಪ್ಪ ಸುಮಾರು 4 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆದಿದ್ದು, ಮಳೆ ಇಲ್ಲದೇ ಅರ್ಧದಷ್ಟು ಬೆಳೆ ಒಣಗಿ ಹೋಗಿದೆ. ಈಗ ಬಂದಿರುವ ಮಳೆಯಿಂದ ಸಂಪೂರ್ಣ ಬೆಳೆ ನಾಶವಾಗಿದೆ ಎಂದು ಅಳಲು ತೋಡಿಕೊಂಡರು. ಕೃಷಿಕರಾದ ಚಿನ್ನಮ್ಮ ಮತ್ತು ಮಹದೇವಮ್ಮ ಸುಮಾರು 2 ಎಕರೆ ಜಮೀನಿನಲ್ಲಿ ಜೋಳ ಬಿತ್ತಿದ್ದೇವು ಎಲ್ಲವೂ ಒಣಗಿಹೋಯಿತು. ಈಗ ಹುರುಳಿ ಬಿತ್ತಿದ್ದೇವೆ ಅದು ಅರ್ಧದಷ್ಟು ಒಣಗಿದೆ ಎಂದರು. ರೈತ ಶ್ರೀಕಂಠ ಮಾತನಾಡಿ, ಸುಮಾರು 5 ಎಕರೆ ಪ್ರದೇಶದಲ್ಲಿ ಟೊಮೋಟೊ ಬೆಳೆದಿದ್ದೆ. ಮಳೆ ಇಲ್ಲದೇ ಸಂಕಷ್ಟ ಎದುರಾಯಿತು. ಈಗ 2 ದಿನಗಳಿಂದ ಮಳೆ ಬಂದು ಬೆಳೆ ಎಲ್ಲವೂ ನಾಶವಾಗಿದೆ. ಸರ್ಕಾರ ಉಚಿತ ವಿದ್ಯುತ್ ನೀಡುತ್ತೇವೆ ಎನ್ನುತ್ತಾರೆ. ಆದರೆ ಸರ್ವೀಸ್ ಕೊಡಲು ಒಂದು ವರ್ಷತೆಗೆದುಕೊಳ್ಳುತ್ತಾರೆ. ರಾತ್ರಿ ಸಮಯದಲ್ಲಿ ಕರೆಂಟ್ ಕೊಡುವುದರಿಂದ ರೈತರಿಗೆ ಸಮಸ್ಯೆ ಉಂಟಾಗಿದೆ. ಕೆಇಬಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ವಿದ್ಯುತ್ ನೀಡದೇ, ಟಿಸಿಗಳನ್ನು ಬದಲಾಯಿಸದೇ ಬೇಜವಬ್ದಾರಿಯಿಂದ ನಡೆದುಕೊಳ್ಳುತ್ತಾರೆ. ಈ ಭಾಗದಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು ರೈತರು ಭಯದ ವಾತಾವರಣದಲ್ಲಿ ಬದುಕು ಸಾಗಿಸುವಂತಾಗಿದೆ ಎಂದು ದೂರಿದರು.

ಸಾಲ ಏನಾದರೂ ಮಾಡಿದ್ದೀರಾ?
ಕುಲಗಾಣ ಗ್ರಾಮದ ರೈತ ತಿರುಪತಿನಾಯಕ ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸೇವಂತಿಗೆ ಹೂ ಒಣಗಿದ್ದ ಪರಿಸ್ಥಿತಿಯನ್ನು ಮನಗಂಡು ಸಾಲ ಏನಾದರೂ ಮಾಡಿಕೊಂಡಿದ್ದೀರಾ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ಅದಲ್ಲದೇ ಮತ್ತೆ 2 ಎಕರೆಯಲ್ಲಿ ಬಾಳೆ, ಟೊಮೋಟೊ ಹಾಗೂ ಚೆಂಡುಹೂ ಬೆಳೆದಿದ್ದೆ. ಮಳೆ ಕೈಕೊಟ್ಟ ಪರಿಣಾಮ ಎಲ್ಲವೂ ಒಣಗಿ ಹೋಗಿದೆ. ಮಳೆ ಆಶ್ರಿತ ಪ್ರದೇಶ ಇದಾಗಿದ್ದು, ಪಂಪ್‌ಸೆಟ್‌ಗಳಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ನೀಡದೇ ಸಾಕಷ್ಟು ಸಮಸ್ಯೆ ಎದುರಾಗಿದೆ ಎಂದರು. ಹೆಗ್ಗೋಠಾರ ಗ್ರಾಮ ರೈತ ನಾಗೇಶ್ ಜಮೀನಿಗೆ ಭೇಟಿ ನೀಡಿ ಗಾಳಿ-ಮಳೆಗೆ ನೆಲೆಕಚ್ಚಿದ ಬಾಳೆಯನ್ನು ವೀಕ್ಷಿಸಿ ರೈತರಿಗೆ ಧೈರ್ಯ ತುಂಬಿದರು. ಬಳಿಕ ಹೆಗ್ಗೋಠಾರ ಗ್ರಾಮದ ರೈತ ಮಾದನಾಯ್ಕ ಮಳೆ ಇಲ್ಲದೇ ಒಣಗಿದ ಕಡ್ಲೇಕಾಯಿಯನ್ನು ಕಿತ್ತುಕೊಂಡು ಬಂದು, ಸುಮಾರು 8 ಎಕರೆಯಲ್ಲಿ ಬೆಳೆದಿದ್ದ ಕಡ್ಲೇಕಾಯಿ ಹಾಗೂ ತೊಗರಿ ಸಂಪೂರ್ಣ ನಾಶವಾಗಿದೆ. ಈ ವರೆಗೂ ಯಾವುದೇ ಬೆಳೆಪರಿಹಾರ ನೀಡಿಲ್ಲ ಎಂದು ಅಳಲು ತೋಡಿಕೊಂಡರು.

ಕರೆಂಟ್‌ಗೆ ಕಾಸು:
ರಾಜ್ಯ ಸರ್ಕಾರ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಾರೆ ಆದರೆ ಹಣ ಕೊಡದೇ ಕರೆಂಟ್ ನೀಡುವುದಿಲ್ಲ ಎಂದು ಸೀಗೆವಾಡಿ ಗ್ರಾಮದ ರೈತ ಮರಿದಾಸನಾಯ್ಕ ಆರೋಪಿಸಿದರು. ಸುಮಾರು 4 ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ದು, ಮಳೆ ಇಲ್ಲದೇ ಸಂಪೂರ್ಣವಾಗಿ ಒಣಗಿದೆ.
ಎಕರೆಗೆ 20 ಸಾವಿರಕ್ಕೂ ಹೆಚ್ಚು ಬಂಡವಾಳ ಹಾಕಿದ್ದೇ, ಎಲ್ಲವೂ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ಈ ವೇಳೆ ಶಾಸಕ ನಿರಂಜನ್‌ಕುಮಾರ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರ ಕರೆಂಟ್ ಉಚಿತ, ಮಹದೇವಪ್ಪನಿಗೂ ಫ್ರೀ, ಸಿದ್ದರಾಮಯ್ಯನಿಗೂ ಫ್ರೀ ಎಂದು ಈಗ ರೈತರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಈ ವರೆಗೂ ಶಾಸಕರೂ ರೈತರ ಸಮಸ್ಯೆಗಳನ್ನು ಕೇಳಿಲ್ಲ. ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಕಿಡಿಕಾರಿದರು.