ಜಿಲ್ಲೆ

ಭಾಷೆ ಅಭಿವ್ಯಕ್ತಿಯ ಸಂವಹನ ಮಾಧ್ಯಮ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ಬಸವಾದಿ ಶರಣರು ಕನ್ನಡ ಭಾಷೆಯನ್ನು ಭಾವನೆಗಳ ಅಭಿವ್ಯಕ್ತಿಯ ಸಂವಹನ ಮಾಧ್ಯಮವಾಗಿ ಮಾತ್ರವಲ್ಲದೆ ಅದನ್ನು ದೇವನೊಲಿಸುವ ಸಾಧನವನ್ನಾಗಿ ಮಾಡಿಕೊಂಡರು ಎಂದು ಉದಕಮಂಡಲದ ಗುರುಬಸವ ಶಾಂತಿನಿಕೇತನದ ಪೀಠಾಧ್ಯಕ್ಷ ಶ್ರೀ ಬಸವಯೋಗಿ ಪ್ರಭುಸ್ವಾಮಿ ಬಣ್ಣಿಸಿದರು.

ತಾಲೂಕಿನ ಸಂತೇಮರಳ್ಳಿ ಇನ್ಫಿನಿಟಿ ಶಾಲೆಯಲ್ಲಿ ಜೆಎಸ್‌ಬಿ ಪ್ರತಿಷ್ಠಾನದ ವತಿಯಿಂದ ಬುಧವಾರ ಆಯೋಜಿಸಿದ್ದ ಕನ್ನಡ ಮಾಸಾಚರಣೆ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆಗೆ ಎರಡೂವರೇ ಸಾವಿರಕ್ಕೂ ಹೆಚ್ಚಿನ ವರ್ಷಗಳ ಇತಿಹಾಸ ಇದೆ. ಆದರೆ ಈ ಭಾಷೆಯನ್ನು ತುಂಬಾ ಪರಿಣಾಮಕಾರಿಯಾಗಿ ಬಳಸಿದವರು 12ನೇ ಶತಮಾನದ ಬಸವಾದಿ ಶಿವಶರಣರು. ಅವರು ಭಾಷೆಯನ್ನು ಭಾವನೆಗಳ ಅಭಿವ್ಯಕ್ತಿಯ ಸಂವಹನ ಮಾಧ್ಯಮವಾಗಿ ಮಾತ್ರವಲ್ಲದೆ, ಅದನ್ನು ದೇವನೊಲಿಸುವ ಸಾಧನವನ್ನಾಗಿ ಮಾಡಿಕೊಂಡರು ಎಂದರು.

ಕಾಯಕವೇ ಕೈಲಾಸ ಸೇರಿದಂತೆ ನಮ್ಮನ್ನು ಆತ್ಮಾವಲೋಕನಕ್ಕೆ ಒಳಪಡಿಸಿಕೊಳ್ಳಬೇಕಾದಂತಹ ಅನೇಕ ಸಂದೇಶಗಳನ್ನು ವಿಶ್ವಗುರು ಬಸವಣ್ಣ ವಚನಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಅಲ್ಲಮ ಪ್ರಭು, ಅಂಬಿಗರ ಚೌಡಯ್ಯ, ಮಾದಾರ ಚನ್ನಯ್ಯ, ಹರಳಯ್ಯ, ಆಯ್ದಕ್ಕಿ ಲಕ್ಕಮ್ಮ ಹೀಗೆ ಹಲವು ಶರಣರು ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಶ್ರಮಿಸುವ ಜತೆಗೆ ಸರಳ ಭಾಷೆಯಲ್ಲಿ ಜನರಿಗೆ ಸಾಹಿತ್ಯ ಉಣಬಡಿಸಿದ್ದಾರೆ ಎಂದರು.

ಶಿಕ್ಷಕ ನಂಜುಂಡಸ್ವಾಮಿ ಮಾತನಾಡಿ, ಬಸವಾದಿ ಶರಣರಿಂದ ಸಾಮಾಜಿಕ ಚಳವಳಿ ಜತೆಯಲ್ಲಿ ಅಕ್ಷರ ಸಂಸ್ಕೃತಿ, ಪ್ರಜಾಪ್ರಭುತ್ವ ಮಾದರಿ ಪರಿಕಲ್ಪನೆಯು ಹುಟ್ಟಿಕೊಂಡಿತು. ಶರಣರಿಂದ ಕನಿಷ್ಠ ವೃತ್ತಿಗಳೂ ಜಾತಿ ನಿರ್ಧಾರಕಗಳಾಗದೆ, ಪದವಿಗಳಂತೆ ಮಾರ್ಪಟ್ಟು, ಶ್ರಮ ಸಂಸ್ಕೃತಿ ಹುಟ್ಟು ಹಾಕಲಾಯಿತು. ವಚನ ಸಂಸ್ಕೃತಿಯಲ್ಲಿನ ಮೌಲ್ಯಗಳು ಶಕ್ತಿಯಾಗಿದ್ದುದ್ದರಿಂದಲೇ ಶರಣ ಸಂಪ್ರದಾಯ, ವಚನಗಳು ಇನ್ನೂ ಉಳಿದು ಅನುಕರಣೀಯವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಕನ್ನಡ ಕಿರುಪುಸ್ತಕ ನೀಡಿ ಪ್ರೋತ್ಸಾಹಿಸಲಾಯಿತು. ಇನ್ಫಿನಿಟಿ ಶಾಲಾ ಆಡಳಿತ ಮಂಡಳಿಯ ಮಂಜುನಾಥ್, ಜೆಎಸ್‌ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ್, ಶಿಕ್ಷಕರಾದ ಸುಜಯ, ಮಮತಾ, ಸೌಭಾಗ್ಯಾ, ಸೌಮ್ಯಾ, ಪದ್ಮಾಂಬಿಕಾ, ಕುಮಾರಿ, ರಾಜೇಶ್ವರಿ, ಜ್ಯೋತಿ, ಅಶ್ವಿನಿ, ಪುಷ್ಪಾಂಜಲಿ, ನಾಗೇಂದ್ರ ಪ್ರಸಾದ್, ಶೇಖರ್ ಇತರರು ಇದ್ದರು.