ಜಿಲ್ಲೆ

ಮಾನಸಿಕ ಸ್ಥೈರ್ಯ ಹೆಚ್ಚಿಸಲು ಕ್ರೀಡೆ ಸಹಕಾರಿ

ಎ.ಎಸ್.ಮಣಿಕಂಠ

ಚಾಮರಾಜನಗರ: ಮಕ್ಕಳು ಕಲಿಕೆಯ ಜತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬಹುದು ಎಂದು ಡಯಟ್ ಪ್ರಾಂಶುಪಾಲ ಹಾಗೂ ಉಪನಿರ್ದೇಶಕ(ಅಭಿವೃದ್ಧಿ) ಎಂ.ಕಾಶೀನಾಥ್ ಸಲಹೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಮಕ್ಕಳ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ದೈಹಿಕವಾಗಿ ಆರೋಗ್ಯ ವಾಗಿದ್ದರೆ, ಆತನ ಮನಸ್ಥಿತಿಯೂ ಉತ್ತಮವಾಗಿರುತ್ತದೆ. ಸಮರ್ಪಕ ದೇಹಸ್ಥಿತಿ ಹೊಂದಿದ್ದರೆ, ಆತ ಮಾನಸಿಕವಾಗಿ ಸದೃಢನಾಗಿರುತ್ತಾನೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಶಾರೀರಿಕ ಕ್ರೀಡಾ ಚಡುವಟಿಕೆಯಲ್ಲಿ ತೊಡಗಿಸಲಾಗುತ್ತದೆ ಎಂದು ಹೇಳಿದರು.

ಮಕ್ಕಳ ಮಾನಸಿಕ ಸ್ಥೆರ್ಯ ಹೆಚ್ಚಿಸಲು ಕ್ರೀಡೆ ಸಹಕಾರಿಯಾಗಿದ್ದು, ಈ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಸರ್ಕಾರವು ಸಹ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಈ ಬಾರಿಯ ಏಷ್ಯಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ನಮ್ಮ ದೇಶ ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದು, ಮುಂದಿನ ದಿನದಲ್ಲಿ ಮೊದಲ ಸ್ಥಾನಕ್ಕೆ ಹೋಗಲಿದೆ ಎಂಬ ವಿಶ್ವಾಸವಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚಾಗಿ ಭಾಗವಹಿಸಿ, ರಾಜ್ಯ ಮಟ್ಟಕ್ಕೆ ತಲುಪುವ ಮೂಲಕ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಆರಂಭಕ್ಕೂ ಮೊದಲು ಗಣ್ಯರು ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಶಾಲಾ ವಿದ್ಯಾರ್ಥಿಗಳ ಪಥಸಂಚಲನದಿಂದ ಗೌರವ ವಂದನೆ ಸ್ವೀಕರಿಸಿ, ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಬಳಿಕ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಶಿಕ್ಷಕರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸೋಮಣ್ಣಗೌಡ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಆರ್.ಶಂಕರ್, ಮಲ್ಲಿಕಾರ್ಜುನ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಕಿರಣ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾಗಣ್ಣ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅನ್ನಪೂರ್ಣ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಮಹದೇವಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.