ಜಿಲ್ಲೆ

ಅಂಗವಿಕಲರಿಗೂ ಶಕ್ತಿತುಂಬಿ

ಎ.ಎಸ್.ಮಣಿಕಂಠ

ಚಾಮರಾಜನಗರ: ಸಾರಿಗೆ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಸಂಚರಿಸುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿರುವಂತೆ, ಪುರುಷ ಅಂಗವಿಕಲರಿಗೂ ಉಚಿತ ಅವಕಾಶ ಮಾಡಿಕೊಡುವ ಒತ್ತಾಯ ಕೇಳಿಬಂದಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಯೋಜನೆಯಿಂದ ಸೀಯರಿಗೆ ಸಾಕಷ್ಟು ಅನುಕೂಲವಾಗಿದ್ದು, ಶಕ್ತಿ ಯೋಜನೆಯಿಂದ ಹಲವು ಉಪಯೋಗಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅಂಗವಿಕಲ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಬರುವಂತೆಯೇ ಪುರುಷ ಅಂಗವಿಕಲರಿಗೂ ಈ ಯೋಜನೆಯನ್ನು ವಿಸ್ತರಣೆ ಮಾಡಬೇಕು ಎಂಬ ಒತ್ತಾಯ ಅಂಗವಿಕಲರಿಂದ ಕೇಳಿಬರುತ್ತಿದೆ.

ಪ್ರಸ್ತುತ ನಿರುದ್ಯೋಗಿ ಅಂಗವಿಕಲರಿಗೆ ರಾಜ್ಯದ ವಿವಿಧ ಸಾರಿಗೆ ಬಸ್‌ಗಳಲ್ಲಿ 100 ಕಿ.ಮೀ ವ್ಯಾಪ್ತಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳಲು ವಾರ್ಷಿಕವಾಗಿ 675 ರೂ.ಗಳನ್ನು ನೀಡಿ ಅಂಗವಿಕಲರು ಪಾಸ್ ಪಡೆದುಕೊಳ್ಳಬೇಕಾಗಿದೆ. ಜಿಲ್ಲೆಯಲ್ಲಿರುವ ಅಂಗವಿಕಲರು ಸಾಕಷ್ಟು ಸಂಖ್ಯೆಯಲ್ಲಿ ಉದ್ಯೋಗ ಬಯಸಿ ಮೈಸೂರು, ಬೆಂಗಳೂರು ಹಾಗೂ ಇನ್ನಿತರೆ ಕಡೆಗಳಿಗೆ ಹೋಗುವುದು ಹೆಚ್ಚಾಗಿದೆ. ಅಂತೆಯೇ ಅಂಗವಿಕಲರಿಗೆ ಎಲ್ಲಾ ಕಡೆಗಳಲ್ಲಿಯೂ ಕೆಲದರ್ಜೆಯ ಹಾಗೂ ಕಡಿಮೆ ಸಂಬಳ ಇರುವ ಉದ್ಯೋಗಳನ್ನು ನೀಡುತ್ತಾರೆ.

ಇಂತಹ ಪರಿಸ್ಥಿತಿಯಲ್ಲಿ ಅಂಗವಿಕಲರು ತಮ್ಮ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಸರ್ಕಾರದಿಂದ ಬರುವ ಅಂಗವಿಕಲರ ಭತ್ಯೆಯನ್ನು ಬಿಟ್ಟರೆ, ಇನ್ನಿತರೆ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪರದಾಟುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಮಹಿಳೆಯರು ಹಾಗೂ ಅಂಧರಿಗೆ ನೀಡಿರುವಂತೆ ರಾಜ್ಯದಾದ್ಯಂತ ಪುರುಷ ಅಂಗವಿಕಲರಿಗೂ ಉಚಿತ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಜಿಲ್ಲಾಧ್ಯಕ್ಷ ಎಂ.ರಮೇಶ್ ವಿಜಯವಾಣಿ ಜತೆ ಅಭಿಪ್ರಾಯ ಹಂಚಿಕೊಂಡರು.

ಸಂಕಷ್ಟದಲ್ಲಿ ಅಂಗವಿಕಲರು:
ಶೇ.75 ರಷ್ಟು ನ್ಯೂನ್ಯತೆ ಇರುವ ಅಂಗವಿಕಲರಿಗೆ ಸರ್ಕಾರದಿಂದ 1400 ರೂ. ಹಾಗೂ ಶೇ.57 ಕ್ಕಿಂತ ಕಡಿಮೆ ನ್ಯೂನ್ಯತೆಯನ್ನು ಒಳಗೊಂಡಿದ್ದರೆ 800 ರೂ. ಅಂಗವಿಕಲರ ಭತ್ಯೆಯನ್ನು ನೀಡಲಾಗುತ್ತಿದೆ. ಇದರಲ್ಲೇ ಅವರು 675 ರೂ. ಸಾರಿಗೆ ಸೌಲಭ್ಯಕ್ಕೆ ನೀಡಿದರೆ ಉಳಿದ ಹಣ ಯಾವ ಉಪಯೋಗಕ್ಕೆ ಬರುತ್ತದೆ. ಈ ಕಾರಣದಿಂದ ಸಾಕಷ್ಟು ವಿಕಲಚೇತನರು ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹಲವು ನಿರುದ್ಯೋಗಿ ಅಂಗವಿಕಲರು ಉದ್ಯೋಗ ದೊರಕದೇ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆಗಾಗಿ ಮಹಿಳೆಯರು ಮತ್ತು ಅಂಧರಿಗೆ ಅವಕಾಶ ಮಾಡಿಕೊಟ್ಟಿರುವಂತೆ ರಾಜ್ಯದ ಎಲ್ಲಕಡೆಗಳಲ್ಲೂ ಅಂಗವಿಕಲರಿಗೆ ಉಚಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅಂಗವಿಕಲರು ಒತ್ತಾಯಿಸಿದ್ದಾರೆ.

ಸ್ವಾಭಿಮಾನದ ಬದುಕಿಗೆ ನೆರವಾಗಿ:
ಅಂಗವಿಲಕಲರನ್ನು ಕಂಡರೆ ಸಾರ್ವಜನಿಕರೇ ಆಗಲೀ ಕುಟುಂಬದವರೇ ಆಗಲೀ ಅನುಕಂಪ ತೋರಿಸುತ್ತಾರೆಯೇ ಹೊರತು ಯಾರು ಕೂಡ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುವುದಿಲ್ಲ. ಅಂತೆಯೇ ಅಂಗವಿಕಲರಿಗಾಗಿ ಸಾಕಷ್ಟು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಸರ್ಕಾರಿ, ಅರೆ ಸರ್ಕಾರಿ ಹಾಗೂ ನಿರುದ್ಯೋಗಿ ಅಂಗವಿಕಲರು ಸಾಕಷ್ಟು ಸಂಖ್ಯೆಯಲ್ಲಿ ಇಂದು ಸ್ವಯಂ ಉದ್ಯೋಗ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸಾರಿಗೆ ಬಸ್‌ಗಳಲ್ಲಿ ರಾಜ್ಯದಾದ್ಯಂತ ಸಂಚರಿಸಲು ಅಂಗವಿಕಲ ಪುರುಷರಿಗೆ ಅವಕಾಶ ಕಲ್ಪಿಸಿದರೆ ಅಂಗವಿಕಲರು ಕೂಡ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಅಂಗವಿಕಲ ಪ್ರವೀಣ್ ವಿಜಯವಾಣಿ ಜತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಲೈಂಗಿಕ ಅಲ್ಪಸಂಖ್ಯಾತರಿಗೂ ಅವಕಾಶ:
ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆಯಲ್ಲಿ ಪ್ರಸ್ತುತ ಲೈಂಗಿಕ ಅಲ್ಪಸಂಖ್ಯಾತರಿಗೂ ಅವಕಾಶ ಮಾಡಿಕೊಡಲಾಗಿದೆ. ಯೋಜನೆ ಜಾರಿಯಾದ ಮೊದಲಿನಲ್ಲಿ ಟ್ರಾನ್ಸ್ ಜೆಂಡರ್ ಅಥವಾ ಲೈಂಗಿಕ ಅಲ್ಪಸಂಖ್ಯಾತರಿಗೆ ಉಚಿತ ಬಸ್ ಲಭ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿತ್ತು. ಈ ವಿಚಾರವಾಗಿ ಬಸ್ ನಿರ್ವಾಹಕರು ಹಾಗೂ ಲೈಂಗಿಕ ಅಲ್ಪಾಸಂಖ್ಯಾತರ ಜತೆಗೆ ಸಾಕಷ್ಟು ಗಲಾಟೆಗಳು ನಡೆದಿದ್ದವು. ಸರ್ಕಾರದ ಆದೇಶವನ್ನು ಸರಿಯಾಗಿ ಅಥೈಸಿದ ಮೇಲೆ ಇವರಿಗೂ ರಾಜ್ಯದಾದ್ಯಂತ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅನುವು ಮಾಡಿಕೊಡಲಾಯಿತು. ಮಹಿಳೆಯರಿಗೆ ಅನುಕೂಲವಾಗುವಷ್ಠೇ ಮಟ್ಟಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುವ ಲೈಂಗಿಕ ಅಲ್ಪಾಸಂಖ್ಯಾತರಿಗೂ ಈ ಯೋಜನೆ ತುಂಬ ಅನುಕೂಲವಾಗಿದೆ ಎಂದು ಸಮತಾ ಸೊಸೈಟಿ ಅಧ್ಯಕ್ಷೆ ದೀಪಾಬುದ್ಧೆ ವಿಜಯವಾಣಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಮಹಿಳೆಯರಿಗಿಂತಲೂ ಶೇ.75 ಕ್ಕಿಂತಲೂ ಹೆಚ್ಚು ನ್ಯೂನ್ಯತೆ ಹೊಂದಿರುವ ಅಂಗವಿಕಲರು ಅಶಕ್ತರಾಗಿದ್ದಾರೆ. ಅಂಗವಿಕಲರಿಗೆ ಬರುವ ಭತ್ಯೆಯಲ್ಲಿನ ಹಣದಲ್ಲೇ ಎಷ್ಟೋ ಜನರು ಬಸ್‌ಪಾಸ್ ಮಾಡಿಸಿಕೊಳ್ಳುತ್ತಾರೆ. ಸರ್ಕಾರ ಶಕ್ತಿ ಯೋಜನೆಯಡಿ ಅಂಗವಿಕಲರಿಗೂ ಅವಕಾಶ ಮಾಡಿಕೊಟ್ಟರೇ ಅನುಕೂಲವಾಗುತ್ತದೆ.-ಎಂ.ರಮೇಶ್, ಅಧ್ಯಕ್ಷರು, ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ, ಚಾಮರಾಜನಗರ. ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಲೈಂಗಿಕ ಅಲ್ಪಸಂಖ್ಯಾತರಿಗೆ ಯೋಜನೆಯ ಮೊದಲಿನಲ್ಲಿ ಅವಕಾಶ ಮಾಡಿಕೊಡುತ್ತಿರಲಿಲ್ಲ. ಈಗ ನಮಗೂ ಉಚಿತ ಸೌಲಭ್ಯ ದೊರೆಯುತ್ತಿದೆ.-ದೀಪಾ ಬುದ್ಧೆ, ಅಧ್ಯಕ್ಷೆ, ಸಮತಾ ಸೊಸೈಟಿ, ಚಾಮರಾಜನಗರ.