ಜಿಲ್ಲೆ

ಜೀವವೈವಿಧ್ಯ ರಕ್ಷಣೆ ಎಲ್ಲರ ಹೊಣೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಜೀವ ವೈವಿಧ್ಯ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಬಿಆರ್‌ಟಿ ನಿರ್ದೇಶಕರು ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ದೀಪಾ ಜೆ. ಕಂಟ್ರಾಕ್ಟರ್ ಹೇಳಿದರು.

ನಗರದ ಕರಿವರದಸ್ವಾಮಿ ಬೆಟ್ಟದಲ್ಲಿ ಜಿಲ್ಲಾ ಅರಣ್ಯ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಬಾಲನ್ಯಾಯ ಮಂಡಳಿ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಈಚೆಗೆ ನಡೆದ ಬಿತ್ತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾನವನು ತನ್ನ ಸ್ವಾರ್ಥದಿಂದ ಗಿಡ-ಮರಗಳನ್ನು ನಾಶ ಮಾಡುತ್ತಾ ಪರಿಸರ ಅಸಮತೋಲನಕ್ಕೆ ಕಾರಣನಾಗಿದ್ದಾನೆ. ಸೃಷ್ಟಿ ನಿಯಮದಂತೆ ಪ್ರತಿಯೊಂದು ಪ್ರಾಣಿಯೂ ಸ್ವತಂತ್ರವಾಗಿ ಬದುಕುವುದು ಪ್ರಕೃತಿ ನಿಯಮ. ಅದನ್ನು ಉಳಿಸಿ ಬೆಳೆಸುವ ಕರ್ತವ್ಯ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಪ್ರಕೃತಿಯನ್ನು ರಕ್ಷಿಸಲು, ನಾವು ಸುಸ್ಥಿರ ಅಭ್ಯಾಸಗಳತ್ತ ಸಾಗಬೇಕಿದೆ. ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸುವುದರ ಮೂಲಕ ಪ್ಲಾಸ್ಟಿಕ್ ಮತ್ತು ಇತರ ಕೊಳೆಯದ ವಸ್ತುಗಳನ್ನು ತ್ಯಜಿಸುವ ಮೂಲಕ ನಾವು ನಮ್ಮ ಪ್ರಕೃತಿಗೆ ದೊಡ್ಡ ಉಪಕಾರವನ್ನು ಮಾಡುತ್ತಿದ್ದೇವೆ. ಪರಿಸರ ಉಳಿಸಿ ಬೆಳೆಸುವ ಮೂಲಕ ಪ್ರಾಣಿಗಳಿಗೆ ವಾಸ್ತವ್ಯ ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರಕೃತಿ ಪೂಜೆ, ನಮ್ಮ ಸಂಸ್ಕೃತಿಯ ಸಂಕೇತವಾಗಿದ್ದು ಕಾಡು ಉಳಿಸಿ ನಾಡು ಬೆಳೆಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಮಾತನಾಡಿ, ಪ್ರತಿ ಮರವನ್ನು ಸಹ ಈ ದಿನಗಳಲ್ಲಿ ಜನರು ಕಡಿದು ಬಿಡುತ್ತಿದ್ದಾರೆ. ಎಷ್ಟೇ ಕಡಿದರೂ ಮತ್ತೂಮ್ಮೆ ಚಿಗುರುವ ಗಿಡಮರವದು. ನಾವೆಲ್ಲ ಪ್ರತಿದಿನ ಪ್ಲಾಸ್ಟಿಕ್ ಬಳಕೆ ಮಾಡಿ ಪರಿಸರವನ್ನೆಲ್ಲ ನಾಶಪಡಿಸುತ್ತಿದ್ದೇವೆ. ಜಲ, ವಾಯು ಮಾಲಿನ್ಯದಿಂದಾಗಿ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಶುದ್ಧ ಗಾಳಿ, ನೀರನ್ನು ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮರಗಳ ನಾಶದಿಂದ ಪರಿಸರವನ್ನು ಸರ್ವನಾಶ ಮಾಡಿದಂತಾಗುತ್ತದೆ. ಈಗಲೇ ನಾವೆಲ್ಲ ಕೈಜೋಡಿಸಿ ಗಿಡ, ಮರಗಳನ್ನು ಬೆಳೆಸಿ ಎಂದರು. ಬಾಲನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್, ವಲಯ ಅರಣ್ಯಾಧಿಕಾರಿ ಉಮೇಶ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಶೋಕ್, ಶ್ರೀನಿಧಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.