ಜಿಲ್ಲೆ

ಒಣಸೋಗು ಹಿಡಿದು ಪ್ರತಿಭಟನೆ

ಎ.ಎಸ್.ಮಣಿಕಂಠ

ಚಾಮರಾಜನಗರ: ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಸುತ್ತಿವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಮುಂದುವರಿದಿದ್ದು, ಬುಧವಾರ ಒಣಸೋಗು ಪ್ರದರ್ಶಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಡಳಿತ ಭವನದ ಮುಖ್ಯದ್ವಾರದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಒಣಸೋಗು ಹಿಡಿದು ಕೇಂದ್ರ ಮತ್ತು ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆಗಳನ್ನು ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ,
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ನಮ್ಮ ಸಂಘಟನೆ ವತಿಯಿಂದ ಕಳೆದ 43 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯದಲ್ಲಿ ನೀರು ಇಲ್ಲದೆ ಬರದಿಂದ ಫಸಲು ಒಣಗಿವೆ. ಇಂತಹ ಸಂದರ್ಭದಲ್ಲಿ ಬೇರೆ ರಾಜ್ಯಕ್ಕೆ ನೀರು ಹರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕರ್ನಾಟಕಕ್ಕೆ ಮುಂದಾದರೂ ಒಳ್ಳೆಯ ಬುದ್ದಿ ಬರಲಿ, ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸಲಿ, ಮುಂದಿನ ದಿನಗಳಲ್ಲಾದರೂ ಕಾವೇರಿ ನೀರು ನಿರ್ವಹಣಾ ಮಂಡಳಿ ಕರ್ನಾಟಕದ ಪರ ತೀರ್ಪು ನೀಡುವ ಒಳ್ಳೆಯ ಬುದ್ದಿ ಬರಲಿ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಣ್ಯದಹುಂಡಿ ರಾಜು,ಮಹೇಶ್‌ಗೌಡ, ಲಿಂಗರಾಜು, ತಾಂಡವಮೂರ್ತಿ, ಗು.ಪುರುಷೋತ್ತಮ್, ವೀರಭದ್ರ, ಮೂಡ್ಲಪುರ ಪ್ರಕಾಶ್,ಮಿಮಿಕ್ರಿ ಮಲ್ಲಣ್ಣ, ನಂಜುಂಡಸ್ವಾಮಿ ಭಾಗವಹಿಸಿದ್ದರು.