ಚಾಮರಾಜನಗರ: ‘ರೈತರೇ ಸಾವಯವ ಗೊಬ್ಬರ ಬಳಸಿ, ಜನ ಸಾಮಾನ್ಯರ ಆರೋಗ್ಯ ಉಳಿಸಿ..ಹಸಿರೇ ಉಸಿರು, ಉಸಿರೇ ಹರಿಸು’.
ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯದ ಬಗ್ಗೆ ಪಾಠ ಮಾಡಿದ್ದ ದೈಹಿಕ ಶಿಕ್ಷಣ ಶಿಕ್ಷಕ ನಿವೃತ್ತಿ ಬಳಿಕ ಸಾವಯವ ಕೃಷಿ ಮಾಡಿ ಇತರೆ ರೈತರಿಗೆ ಈ ರೀತಿ ಸಂದೇಶ ನೀಡುತ್ತಿದ್ದಾರೆ. ತಾಲೂಕಿನ ಸಂತೇಮರಹಳ್ಳಿ ಸಮೀಪದ ಕಾವುದವಾಡಿ ಗ್ರಾಮದ ನಿವಾಸಿ ಕೆ.ಸಿ.ರಾಚೇಗೌಡ ನಿವೃತ್ತಿ ಜೀವನದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಮಗ ಮೈಸೂರಿನಲ್ಲಿ ಸ್‌ಟಾವೇರ್ ಇಂಜಿನಿಯರ್, ಮಗಳು ಮತ್ತು ಅಳಿಯ ಯುಎಸ್‌ಎನಲ್ಲಿ ಇದ್ದಾರೆ.
1985ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಆಯ್ಕೆಯಾದ ಕೆ.ಸಿ.ರಾಚೇಗೌಡ 2018ರಲ್ಲಿ ನಿವೃತ್ತಿ ಹೊಂದಿದರು. ತಮ್ಮ ಸೇವಾ ಅವಧಿಯಲ್ಲಿ ಚಾಮರಾಜನಗರ, ಮೈಸೂರು ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ದೈಹಿಕ ಮತ್ತು ಮಾನಸಿಕ ಶಿಕ್ಷಣ ನೀಡಿದರು. ನಿವೃತ್ತಿ ಬಳಿಕ ತಂದೆಯಿಂದ ಬಳುವಳಿಯಾಗಿ ಬಂದಿರುವ 5.32 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ವ್ಯವಸಾಯದ ಮೇಲೆ ತುಂಬಾ ಆಸಕ್ತಿ ಹೊಂದಿರುವ ಕೆ.ಸಿ.ರಾಚೇಗೌಡ ಶಿಕ್ಷಕ ವೃತ್ತಿಯ ಮಧ್ಯೆಯೂ ಜಮೀನ ಕಡೆ ಗಮನ ನೀಡುತ್ತಿದ್ದರು.
ನಿವೃತ್ತಿ ನಂತರ ಸಂಪೂರ್ಣವಾಗಿ ಕೃಷಿಗಿಳಿದು ರಾಸಾಯನಿಕ ಮುಕ್ತ ಕೃಷಿ ಮಾಡಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಸಾವಯವ ಕೃಷಿಯಲ್ಲಿ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಾವುದವಾಡಿಯಲ್ಲಿ ತಾತ ಕಾಕಪ್ಪ ಹೆಸರಿನಲ್ಲಿ ಾರಂ ಮಾಡಿ, ಮುಖ್ಯದ್ವಾರದ ಕಾಂಪೌಂಡ್ ಮೇಲೆ ‘ರೈತರೇ ಸಾವಯವ ಗೊಬ್ಬರ ಬಳಸಿ, ಜನ ಸಾಮಾನ್ಯರ ಆರೋಗ್ಯ ಉಳಿಸಿ..ಹಸಿರೇ ಉಸಿರು, ಉಸಿರೇ ಹರಿಸು’ ಎಂಬ ಸಂದೇಶವನ್ನು ಬರೆಸಿದ್ದಾರೆ.
ಇದಕ್ಕೆ ತಕ್ಕಂತೆಯೇ ಜಮೀನಿನ ಒಳಗೆ ಬೆಳೆಗಳನ್ನು ಬೆಳೆದಿದ್ದಾರೆ. ಬಾಳೆ, ಕಬ್ಬು, 300 ತೆಂಗಿನ ಸಸಿಗಳು, 900 ಅಡಕೆ ಗಿಡಗಳು, 40 ಮಾವಿನ ಗಿಡಗಳು, 20 ಸಪೋಟ, 30 ಸೀಬೆ, 15 ಬಟರ್ ಪ್ರೂಟ್, ಜಾಯಿಕಾಯಿ, ಡ್ರಾೃಗನ್ ಪ್ರೂಟ್, ಪರಂಗಿ ಗಿಡಗಳು ಹಚ್ಚ ಹಸಿರಿನಿಂದ ನಳನಳಿಸುತ್ತಿವೆ. ಏಲಕ್ಕಿ ಬಾಳೆ, ನೇಂದ್ರಬಾಳೆ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಕಬ್ಬು ಕಟಾವು ಕೆಲಸ ನಡೆಯುತ್ತಿದ್ದು, ಉತ್ತಮ ಸಲು ಸಿಕ್ಕಿದೆ. ಬಾಳೆ ಮಧ್ಯೆ ಅಡಿಕೆ, ಬಟರ್ ್ರೂಟ್, ಜಾಯಿಕಾಯಿ, ಡ್ರಾೃಗನ್ ಪ್ರೂಟ್ ಮತ್ತು ಇತರೆ ಗಿಡಗಳನ್ನು ಹಾಕಿದ್ದಾರೆ. ಕಳೆದ ವರ್ಷ ತರಕಾರಿ ಬೆಳೆಗಳನ್ನು ಬೆಳೆದಿದ್ದ ಕೆ.ಸಿ.ರಾಚೇಗೌಡರು ಈಗ ಬಾಳೆ ಮತ್ತು ಹಣ್ಣಿನ ಗಿಡಗಳತ್ತ ಆಸಕ್ತಿ ತೋರಿದ್ದಾರೆ. ಬಾಳೆ ಮತ್ತು ಕಬ್ಬಿನಿಂದ ಈ ವರ್ಷ ಒಟ್ಟು 6 ಲಕ್ಷ ರೂ. ಆದಾಯ ಗಳಿಸುವ ನೀರಿಕ್ಷೆಯಲ್ಲಿದ್ದಾರೆ. ಉಳಿದ ಗಿಡಗಳಿಂದ ಭವಿಷ್ಯದಲ್ಲಿ ಉತ್ತಮ ಸಲ ದೊರೆಯುವ ನಂಬಿಕೆಯಲ್ಲಿದ್ದಾರೆ.
ಗಿಡಗಳಿಗೆ ಜೀವಾಮೃತ:
ಬೆಳೆಗಳಿಗೆ ರಾಸಾಯನಿಕ ಔಷಧಿಗಳನ್ನು ಸಿಂಪಡಿಸದೆ ಸಾವಯವ ಪದ್ಧತಿಯಲ್ಲೇ ಕೃಷಿ ಮಾಡಬೇಕೆಂಬ ಉದ್ದೇಶವನ್ನು ಹೊಂದಿರುವ ಕೆ.ಸಿ.ರಾಚೇಗೌಡ ಜೀವಾಮೃತ, ಔಷಧಿಯನ್ನು ತಾವೇ ತಯಾರಿಸಿಕೊಳ್ಳುತ್ತಿದ್ದಾರೆ. ಕೆ.ಸಿ.ರಾಚೇಗೌಡ ಅವರು ಹಸುಗಳನ್ನು ಸಾಕಿಲ್ಲ. ಹಾಗಾಗಿ ಇವರು ಗೋಮೂತ್ರ, ಸಗಣಿಯನ್ನು ಹಣ ಕೊಟ್ಟು ಖರೀದಿ ಮಾಡಿ ಇದರಿಂದ ಜೀವಾಮೃತ ತಯಾರಿಸುತ್ತಿದ್ದಾರೆ. ಇನ್ನು ಹನಿ ನೀರಾವರಿ ಪದ್ಧತಿಯಲ್ಲಿ ಗಿಡಗಳ ಬೇರಿಗೆ ನೀಡುತ್ತಿದ್ದಾರೆ. ಕಳೆ ಔಷಧಿಗಳನ್ನು ಉಪಯೋಗಿಸುತ್ತಿಲ್ಲ. ಗಿಡಗಳಿಗೆ ರೋಗ ಬಂದರೆ ತಾವೇ ಔಷಧಿಗಳನ್ನು ಸಿದ್ಧಪಡಿಸುತ್ತಿದ್ದಾರೆ. ಕೆ.ಸಿ.ರಾಚೇಗೌಡ ಕೃಷಿಗಾಗಿ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಂಡಿರುವುದು ಕಡಿಮೆ. ಕೃಷಿ ಹೊಂಡವನ್ನು ನಿರ್ಮಾಣ ಮಾಡಲಾಗಿದೆ. ಒಂದು ಬೋರ್‌ವೆಲ್ ಇದೆ. ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಯೂಟ್ಯೂಬ್ ಗುರು:
ಕೆ.ಸಿ.ರಾಚೇಗೌಡರ ಸಾವಯವ ಕೃಷಿಗೆ ಯೂಟ್ಯೂಬ್ ಗುರು. ಇಸ್ರೇಲ್ ಮಾದರಿಯಲ್ಲಿ ಕೃಷಿ ಮಾಡಬೇಕೆಂಬ ಗುರಿಯನ್ನು ಹೊಂದಿರುವ ಇವರು ಸಾವಯವ ವಿಧಾನಗಳನ್ನು ಅನುಸರಿಸಲು ಯೂಟ್ಯೂಬ್‌ನಲ್ಲಿರುವ ವಿಡಿಯೋಗಳನ್ನು ನೋಡುತ್ತಾರೆ. ಮುಂದಿನ ದಿನಗಳಲ್ಲಿ ಇಸ್ರೇಲ್ ಮಾದರಿಯಲ್ಲಿ ಗಿಡಗಳ ರೋಗಕ್ಕೆ ಔಷಧಿಯನ್ನು ತಯಾರಿಸಬೇಕಂತಲೂ ಇದ್ದಾರೆ.
ರೈತರಿಗೂ ಪಾಠ:
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೆ.ಸಿ.ರಾಚೇಗೌಡ ರೈತರಿಗೆ ಸಾವಯವ ಕೃಷಿಯ ಪಾಠ ಮಾಡುತ್ತಿದ್ದಾರೆ. ಅಂದರೆ ತಮ್ಮ ಜಮೀನಿಗೆ ಬರುವ ಇತರೆ ರೈತರಿಗೆ ಸಾವಯವ ವಿಧಾನದಲ್ಲಿ ಬೆಳೆದಿರುವ ಗಿಡಗಳು, ಸಲನ್ನು ತೋರಿಸಿ ಈ ವಿಧಾನ ಅನುಸರಿಸಲು ಪ್ರೇರೇಪಣೆ ನೀಡುತ್ತಿದ್ದಾರೆ. ಜೀವಾಮೃತ ತಯಾರಿಕೆ, ಗಿಡಗಳ ಪೋಷಣೆ, ಇಳುವರಿ ಬಗ್ಗೆ ವಿವರಿಸಿ ರಾಸಾಯನಿಕ ಮುಕ್ತ ಬೆಳೆ ಬೆಳೆಯಬೇಕಾಗಿರುವ ಅಗತ್ಯತೆಯನ್ನು ತಿಳಿಸುತ್ತಿದ್ದಾರೆ.
ಭೂಮಿ ಮತ್ತು ಮುಂದಿನ ಪೀಳಿಗೆ ಉಳಿಯಬೇಕೆಂದರೆ ಸಾವಯವ ಕೃಷಿಯನ್ನೇ ಮಾಡಬೇಕು. ಇದರಿಂದ ಭೂಮಿ ಚೆನ್ನಾಗಿರುತ್ತದೆ. ರಾಸಾಯನಿಕ ಮುಕ್ತ ಆಹಾರ ಸೇವನೆಯಿಂದ ಜನರ ಆರೋಗ್ಯ ಕಾಪಾಡಬಹುದು. ಈ ಉದ್ದೇಶದಿಂದ ನಾನು ಸಾವಯವ ಕೃಷಿಯನ್ನು ಮಾಡುತ್ತಿದ್ದಾರೆ.-ಕೆ.ಸಿ.ರಾಚೇಗೌಡ, ಸಾವಯವ ಕೃಷಿಕ,ಕಾವುದವಾಡಿ, ಚಾಮರಾಜನಗರ