ಚಾಮರಾಜನಗರ:ಸುಮಧುರ ಚಿತ್ರಗೀತೆಗಳ ಗಾಯನಕ್ಕೆ ಮನಸೋತ ಪ್ರೇಕ್ಷಕರು, ಕಲಾರಸಿಕರ ಉಬ್ಬೆರುವಂತೆ ಮಾಡಿದ ವಿವಿಧ ಬಗೆಯ ನೃತ್ಯ ವೈಭವ. ಹರ್ಷೋದ್ಘಾರದಲ್ಲಿ ಮಿಂದೆದ್ದ ಜನರ ನಡುವೆ ನಾಲ್ಕು ದಿನಗಳ ಜಿಲ್ಲಾ ದಸರಾ ಮಹೋತ್ಸವಕ್ಕೆ ತೆರೆ ಬಿದ್ದಿತು.
ಮೈಸೂರು ದಸರಾ ಮಹೋತ್ಸವ ಸಮಿತಿ ಹಾಗೂ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಅ.೧೭ ರಿಂದ ೨೦ ರವರೆಗೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಮುಖ್ಯ ವೇದಿಕೆ, ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರ ಹಾಗೂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮ, ನಾಟಕೋತ್ಸವಕ್ಕೆ ಹಾಗೂ ವಿವಿಧ ಕಾರ್ಯಕ್ರಮಗಳಿಗೆ ಶುಕ್ರವಾರ ಸಂಭ್ರಮದ ತೆರೆ ಬಿದ್ದಿತು.
ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಬೆಳಿಗ್ಗೆಯಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ದಸರಾ ಮಹೋತ್ಸವದ ಕೊನೆಯ ದಿನ ಆಯೋಜಿಸಿದ್ದ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರು. ವಿವಿಧ ಬಗೆಯ ನೃತ್ಯರೂಪಕ, ಸುಮಧುರ ಚಿತ್ರಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ ನೆರೆದ ಜನರನ್ನು ಕಲಾವಿದರು ರಂಜಿಸಿದರು.
ಜಿಲ್ಲೆಯ ದಸರಾ ಮಹೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ೩ ವೇದಿಕೆಗಳಲ್ಲಿ ಯಶಸ್ವಿಯಾಗಿ ನಡೆದವು. ಶುಕ್ರವಾರದ ಸಮಾರೋಪ ಸಮಾರಂಭದ ಮೂಲಕ ೪ ದಿನಗಳ ದಸರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು.-ಗುರುಲಿಂಗಯ್ಯ, ಉಪನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ.