ಚಾಮರಾಜನಗರ: ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ತಂಬೂರಿ, ಸೋಬಾನೆ ಪದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಲ್ಲದೇ ಸಭಾಂಗಣ ಬಣಗುಟ್ಟಿತು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೆಳಿಗ್ಗೆಯಿಂದಲೂ ಪ್ರೇಕ್ಷಕರ ಕೊರತೆ ಕಂಡುಬಂದಿತು. ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ನೀಲಗಾರರು, ತಂಬೂರಿ ಕಲಾವಿದರು, ಭಜನೆ ಕಲಾವಿದರು, ಜನಪದ ಹಾಡುಗಾರರು, ಸೋಬಾನೆ ಹಾಡುವ ಮಹಿಳೆಯರು ಬಿಟ್ಟರೇ ಪ್ರೇಕ್ಷಕರು ಎರಡಂಕಿಯನ್ನು ದಾಟಲಿಲ್ಲ. ಈ ನಡುವೆ ಕಲಾವಿದರು, ಕಲಾವಿದರಿಗಾಗಿಯೇ ವಿವಿಶ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದರು.
ನಗರದ ಸಿಂದೂರ ಭಜನೆ ಮಂಡಳಿಯಿಂದ ನಡೆದ ಭಜನೆಯಿಂದ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ರಾಮಸಮುದ್ರ ಪಿ.ನಾಗರಾಜು, ಕಂದೇಗಾಲ ಪುಟ್ಟರಾಚಯ್ಯ, ದೊಡ್ಡಮೋಳೆ ಸಣ್ಣಶೆಟ್ಟಿ ಮತ್ತು ತಂಡ, ಹರದನಹಳ್ಳಿ ಚೆನ್ನಿಗಶೆಟ್ಟಿ ತಂಡ, ಚಿಲಕವಾಡಿ ಶಿವಮೂರ್ತಿ ತಂಡ ಹಾಗೂ ಹೆಗ್ಗೋಠಾರ ಮಂಟೇಸ್ವಾಮಿ ನೀಲಗಾರರ ಸಂಘದ ಕಲಾವಿದರು ತಂಬೂರಿ ಪದವನ್ನು ಪ್ರಸ್ತುತಪಡಿಸಿದರು.
ಬೆಂಡರವಾಡಿ ಸಿದ್ದರಾಜು ತಂಡ, ನಲ್ಲೂರು ಶಂಕರ್ ತಂಡ, ಚಾ.ನಗರ ಮಹೇಶ್ ತಂಡ ಹಾಗೂ ಮಲೆಯೂರು ಎಸ್.ಮಹೇಶ್ ತಂಡ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಮದ್ದೂರು ಯೋಗೇಶ್, ಪ್ರಕಾಶ್, ಬಸವರಾಜು ಮತ್ತು ಗಾಳೀಪುರ ಗೀರೀಶ್ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸುಮಾರು 100 ಕ್ಕೂ ಹೆಚ್ಚು ಸ್ಥಳೀಯ ಕಲಾವಿದರುಸೋಬಾನೆ ಪದ ಹಾಡಿದರು. ಹೆಗ್ಗೋಠಾರ ಮಹದೇವಸ್ವಾಮಿ, ಕೋಡಿಉಗನೆ ನಂಜುಂಡಯ್ಯ, ಗುಂಡ್ಲುಪೇಟೆ ಬಂಗಾರನಾಯ್ಕ ಜನಪದ ಸಂಗೀತ ಗಾಯನ ನಡೆಸಿಕೊಟ್ಟರು. ಗುಂಡ್ಲುಪೇಟೆಯ ಬಿ.ಎಸ್.ಅಕ್ಷತಾ, ಕೃಷ್ಣ ಹಾಗೂ ಇರಸವಾಡಿ ಸಂಪತ್‌ಕುಮಾರ್ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.