ಚಾಮರಾಜನಗರ: ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರಂಗಗೀತೆಗಳ ಗಾಯನ ಹಾಗೂ ಪೌರಾಣಿಕ ದಕ್ಷಯಜ್ಞ ನಾಟಕ ಪ್ರದರ್ಶನಕ್ಕೆ ರಂಗಾಸಕ್ತರಿಂದ ಉತ್ತಮ ಸ್ಪಂದನೆ ದೊರೆಯಿತು.
ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ದಕ್ಷಯಜ್ಞ ಪೌರಾಣಿಕ ನಾಟಕಕ್ಕೆ ರಂಗಾಸಕ್ತರು ಹಾಗೂ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಹರಿದುಬಂದರು. ರಂಗಮಂದಿರ ಪ್ರೇಕ್ಷಕರಿಂದ ಸಂಪೂರ್ಣವಾಗಿ ತುಂಬಿಹೋಗಿತ್ತು. ಈ ಮೂಲಕ ದಸರಾ ಮಹೋತ್ಸವದಲ್ಲಿ ಸಾಮಾಜಿಕ ನಾಟಕಗಳಿಗಿಂತಲೂ ಪೌರಾಣಿಕ ನಾಟಕಗಳಿಗೆ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿದ್ದು ಕಂಡುಬಂದಿತು.
ದಕ್ಷಯಜ್ಞ ನಾಟಕವನ್ನು ಎಂ.ಎನ್.ರಮೇಶ್ ಮತ್ತು ರಾಜಪ್ಪ ಆಯೋಜನೆ ಮಾಡಿದ್ದರು. ದಕ್ಷನಾಗಿ ಕ್ಯಾತಾಮಾರನಹಳ್ಳಿ ಎಂ.ಭಾಸ್ಕರ್, ಜಾಲಬ್ರಮ್ಮನಾಗಿ ನಿಂಗಯ್ಯ, ವಿಷ್ಣುವಾಗಿ ಸುರೇಂದ್ರ, ನಂದೀಶ್ವರನಾಗಿ ಸಾಗರ್, ಅಲ್ಲದೇ ವಿವಿಧ ಪಾತ್ರಗಳಲ್ಲಿ ಮೂರ್ತಿ, ಬಸಪ್ಪ, ಪುರುಷೋತ್ತಮ್, ಮಹದೇಶ್ ಹೆಜ್ಜಿಗೆ, ದಡದಹಳ್ಳಿ ಸೂರ್ಯಮೂರ್ತಿ, ಹೊಂಗನೂರು ನಾಗರಾಜ್, ಕೆಲ್ಲಂಬಳ್ಳಿ ಕುಮಾರ್ ಉತ್ತಮವಾಗಿ ಅಭಿನಯಿಸಿ ನೋಡುಗರ ಗಮನಸೆಳೆದರು.