ಜಿಲ್ಲೆ

ಚಾ.ನಗರ ದಸರಾಗೆ ಸಂಭ್ರಮದ ಚಾಲನೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಚಾಮರಾಜನಗರ ದಸರಾಗೆ ಮಂಗಳವಾರ ಸಂಭ್ರಮದ ಚಾಲನೆ ದೊರೆಯಿತು. ಶ್ರೀ ಚಾಮರಾಜೇಶ್ವರನಿಗೆ ಪೂಜೆ, ಕವಿಗೋಷ್ಠಿ, ಚಿತ್ರಕಲಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಮಹೋತ್ಸವಕ್ಕೆ ಮೆರುಗು ತಂದವು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಪೂಜೆ ಸಲ್ಲಿಸಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಜತೆಗಿದ್ದರು. ನಂದಿಕಂಬಕ್ಕೆ ಪೂಜೆ ಸಲ್ಲಿಸಿ ನಂತರ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಕಲಾವಿದ ಮಧುಸೂದನ್ ಹೊಸೂರು, ತೇಜಸ್ ಸೇವಾ ಸಂಸ್ಥೆಯ ಅಧ್ಯಕ್ಷ ರವಿತೇಜ್, ಸಂಪತ್ತು ಮತ್ತು ಇತರರು ಭಿನ್ನ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ಸಚಿವ ಕೆ.ವೆಂಕಟೇಶ್ ಶ್ರೀ ಚಾಮರಾಜೇಶ್ವರ ಉದ್ಯಾನದ ಆವರಣದಲ್ಲಿರುವ ಶ್ರೀ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ರಾಜ್ಯದಲ್ಲಿ ಮಳೆಯಾಗದೆ ಬರದ ಪರಿಸ್ಥಿತಿ ಬಂದಿದ್ದು, ಹಾಕಿದ ಬೆಳೆ ಕೈಗೆ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮಳೆ, ಬೆಳೆಯಾಗಲೆಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು. ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನ ಆವರಣದಲ್ಲಿ ಜಿಲ್ಲಾಡಳಿತ, ದಸರಾ ಮಹೋತ್ಸವ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬರದ ಸಂದರ್ಭದಲ್ಲಿ ದಸರಾ ನಡೆಯುತ್ತಿದೆ. ಕುಡಿಯುವ ನೀರಿನ ತೊಂದರೆ, ವಿದ್ಯುತ್ ಅಭಾವ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಜಲಾಶಯಗಳು ಖಾಲಿಯಾಗಿವೆ. ಹೀಗಿದ್ದರೂ ತಮಿಳುನಾಡಿಗೆ ಈ ತಿಂಗಳ ಅಂತ್ಯದವರೆಗೂ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎನ್ನುವುದು ಅಘಾತಕಾರಿ ವಿಚಾರ ಎಂದರು.


ಬರದ ಹಿನ್ನೆಲೆಯಲ್ಲಿ ಈ ವರ್ಷ ಸರಳ ದಸರಾ ಹಮ್ಮಿಕೊಳ್ಳಲಾಗಿದೆ. ಮುಂದಿನ ವರ್ಷ ಮಳೆ, ಬೆಳೆ ಚೆನ್ನಾಗಿ ಆಗಲಿ. ದಸರಾವನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ದಸರಾ ಹಬ್ಬ ಸಹಬಾಳ್ವೆಯ ಸಂಕೇತ. ಮಳೆ, ಬೆಳೆ ಇಲ್ಲದಿದ್ದರೂ ದಸರಾ ನಿಲ್ಲಬಾರದೆಂದು ಜಿಲ್ಲೆಯಲ್ಲಿ ಸರಳವಾಗಿ ಆಚರಣೆ ಮಾಡುತ್ತಿದ್ದೇವೆ. ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಚ್.ಎಂ.ಗಣೇಶ್‌ಪ್ರಸಾದ್, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್ ಪ್ರಕಾಶ್ ಮೀನಾ, ಉಪ ವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಬಸವರಾಜು, ಪೌರಾಯುಕ್ತ ರಾಮದಾಸ್, ನಗರಸಭೆ ಸದಸ್ಯೆ ಚಿನ್ನಮ್ಮ ಇತರರು ಇದ್ದರು.