ಚಾಮರಾಜನಗರ: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಕ್ಷಣಗಣನೆ ಇರುವಾಗಲೇ, ಶ್ರೀ ಚಾಮರಾಜೇಂದ್ರ ಒಡೆಯರು ಜನ್ಮತಾಳಿದ ಸವಿನೆನಪಿನಲ್ಲಿ ನಡೆಯುತ್ತಿದ್ದ ಶ್ರೀಚಾಮರಾಜೇಶ್ವರ ಐತಿಹಾಸಿಕ ದರ್ಬಾರೋತ್ಸವನ್ನು ಹಿರಿಯರು ಮೆಲುಕು ಹಾಕಿದ್ದಾರೆ.
ಮೈಸೂರು ದಸರಾ ಮಹೋತ್ಸವ ಸಮಿತಿ ಸಹಯೋಗದಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಅ.17 ರಿಂದ 20 ರವರೆಗೆ ಚಾ.ನಗರ ದಸರಾ ಮಹೋತ್ಸವ ಆಯೋಜನೆಗೊಂಡಿದೆ. ದಸರಾ ಮಹೋತ್ಸವಕ್ಕೆ ಈಗಾಗಲೇ ಸಾಕಷ್ಟು ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ಮೈಸೂರು ದಸರಾಕ್ಕೂ, ಈ ಹಿಂದೆ ಚಾಮರಾಜನಗರದಲ್ಲಿ ನಡೆಯುತ್ತಿದ್ದ ಶ್ರೀಚಾಮರಾಜೇಶ್ವರ ದರ್ಬಾರೋತ್ಸವಕ್ಕೂ ಐತಿಹಾಸಿಕ ಸಂಬಂಧವಿದ್ದು, ಚಾ.ನಗರ ದಸರಾ ಮಹೋತ್ಸವದಲ್ಲಿ ಶ್ರೀಚಾಮರಾಜೇಶ್ವರ ದರ್ಬಾರೋತ್ಸವ ಮರುಕಲಿಸಲಿ ಎಂಬ ಆಶಯ ವ್ಯಕ್ತವಾಗುತ್ತಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರ ತಂದೆ ಚಾಮರಾಜೇಂದ್ರ ಒಡೆಯರು 1776 ರಲ್ಲಿ ಚಾಮರಾಜನಗರದಲ್ಲಿ ಜನಿಸಿದರು. ತಮ್ಮ ತಂದೆಯ ನೆನಪಿಗಾಗಿ ಕೃಷ್ಣರಾಜ ಒಡೆಯರು ಅರಿಕುಠಾರ ಎಂದು ಕರೆಯುತ್ತಿದ್ದ ಊರಿನ ಹೆಸರನ್ನು ಚಾಮರಾಜನಗರ ಎಂದು ಬದಲಾಯಿಸಿ, ನಗರದ ಹೃದಯ ಭಾಗದಲ್ಲಿ ಶ್ರೀಚಾಮರಾಜೇಶ್ವರ ದೇವಸ್ಥಾನವನ್ನು ಕಟ್ಟಿಸಿದರು. ಚಾಮರಾಜ ಒಡೆಯರು ಹುಟ್ಟಿದ ಜನನ ಮಂಟಪದಲ್ಲಿ ಶ್ರೀಚಾಮರಾಜೇಶ್ವರ ದರ್ಬಾರೋತ್ಸವವನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದರು. ಮೈಸೂರಿನಲ್ಲಿ ಜರುಗುವ ಮಹಾರಾಜರ ದರ್ಬಾರ್‌ನಂತೆಯೇ, ಜನನ ಮಂಟಪದಲ್ಲೂ ಶ್ರೀ ಚಾಮರಾಜೇಶ್ವರ ದರ್ಬಾರ್ ನಡೆಯುತ್ತಿತ್ತು. ಶ್ರೀಚಾಮರಾಜೇಶ್ವರ ಉತ್ಸವಮೂರ್ತಿಯನ್ನು ವಿವಿಧ ಆಭರಣಗಳಿಂದ ಸಿಂಗರಿಸಿ ದರ್ಬಾರ್‌ನಲ್ಲಿ ಕೂರಿಸಿ ವೈದಿಕರು, ಅರ್ಚಕರು, ಆಗಮಿಕರು ವೇದೋಷಗಳೊಂದಿಗೆ ಪರಾಕ್ ಹೇಳಿ 9 ದಿನಗಳ ಕಾಲವೂ ದರ್ಬಾರೋತ್ಸವ ನಡೆಯುತ್ತಿತ್ತು. ಇದು ಬರಬರುತ್ತಾ ಅನೇಕ ಕಾರಣಗಳಿಂದ ತನ್ನ ಮಹತ್ವವನ್ನು ಕಳೆದುಕೊಂಡಿದೆ. ಇತ್ತೀಚೆಗೆ ಮೈಸೂರು ದಸರಾ ಮಹೋತ್ಸವ ಚಾಮರಾಜನಗರ ಜಿಲ್ಲೆಗೂ ವಿಸ್ತರಣೆಯಾಗಿದ್ದು, ಚಾ.ನಗರ ದಸರಾ ಮಹೋತ್ಸವದಲ್ಲಿ ಅನೇಕ ಐತಿಹಾಸಿಕ, ಸಾಂಸ್ಕೃತಿಕ, ಜಾನಪದ ಸೊಗಡು ಪಸರಿಸುತ್ತಿದೆ. ಇದೇ ಸಂದರ್ಭದಲ್ಲಿ ಶ್ರೀಚಾಮರಾಜೇಶ್ವರ ದರ್ಬಾರೋತ್ಸವ ಮರುಕಳಿಸಲಿ ಎಂದು ಶ್ರೀ ಚಾಮರಾಜೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ರಾಮಕೃಷ್ಣ ಭಾರಧ್ವಜ್ ವಿಜಯವಾಣಿಗೆ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.
ನೇಪಥ್ಯಕ್ಕೆ ಸರಿದ ದರ್ಬಾರೋತ್ಸವ:
ಮೈಸೂರು ದಸರಾ ಸಂದರ್ಭದಲ್ಲಿ ಚಾಮರಾಜನಗರದಲ್ಲೂ ಶ್ರೀ ಚಾಮರಾಜೇಶ್ವರ ದರ್ಬಾರೋತ್ಸವ ನಡೆಸುವ ಉದ್ದೇಶದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಸುಮಾರು 13 ಗ್ರಾಮಗಳನ್ನು ದೇವಸ್ಥಾನದ ಆದಾಯಕ್ಕೆ ಬಿಟ್ಟಿದ್ದರು. ದೇವಾಲಯದ ಆದಾಯ ಚೆನ್ನಾಗಿರುವವರೆಗೂ ಶ್ರೀಚಾಮರಾಜೇಶ್ವರ ದೇವಾಲಯದಲ್ಲಿ ವಿಜೃಂಭಣೆಯಿಂದ ಪೂಜಾ ಕೈಂಕರ್ಯಗಳು ನಡೆದುಕೊಂಡು ಬರುತ್ತಿದ್ದವು. ನವರಾತ್ರಿಯ ಸಮಯದಲ್ಲಿ ಶ್ರೀಚಾಮರಾಜೇಶ್ವರ ದರ್ಬಾರೋತ್ಸವವೂ ವಿಜೃಂಭಣೆಯಿಂದ ಜರುಗುತ್ತಿತ್ತು. ನಂತರದಲ್ಲಿ ಸರ್ಕಾರದ ರೀತಿನೀತಿಗಳು ಹಾಗೂ ಅನೇಕ ಕಾಯಿದೆಗಳಿಂದ ದೇವಸ್ಥಾನಕ್ಕೆ ಬರುವ ಆದಾಯ ಕಡಿಮೆಯಾಗಿ ದರ್ಬಾರೋತ್ಸವ ಮುಂತಾದ ಪೂಜಾಕೈಂಕರ್ಯಗಳು ನೇಪಥ್ಯಕ್ಕೆ ಸರಿದವು. ಲಕ್ಷಾಂತರ ರೂ. ಖರ್ಚು ಮಾಡಿ ದಸರಾ ಆಚರಣೆ ಮಾಡುವ ಸಂದರ್ಭದಲ್ಲಿ ನಮ್ಮ ಐತಿಹಾಸಿಕ ಪರಂಪರೆಯನ್ನು ಸಾರುವ ಕಾರ್ಯಕ್ರಮಗಳು ಅನಾವರಣಗೊಳ್ಳಲಿ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಮಹಾರಾಜರ ಕೊಡುಗೆ ಅನಾವರಣಗೊಳ್ಳಲಿ:
ಈ ಬಾರಿಯ ಚಾಮರಾಜೇಶ್ವರ ದಸರಾ ಮಹೋತ್ಸವದಲ್ಲಿ ಮೈಸೂರು ಮಹಾರಾಜರು ನಾಡಿಗೆ ನೀಡಿದ ಕೊಡುಗೆಗಳು ಅನಾವರಣಗೊಳ್ಳಲಿ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಚಾ.ನಗರ ದಸರಾ ಉದ್ಘಾಟನೆ ಸಮಯದಲ್ಲಿ ಹಾಗೂ ಮುಖ್ಯ ವೇದಿಕೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು, ಚಾಮರಾಜೇಂದ್ರ ಒಡೆಯರ ಭಾವಚಿತ್ರಗಳು ಕಡ್ಡಾಯವಾಗಿ ಅನಾವರಣಗೊಳ್ಳಲಿ. ಕಲಾತಂಡಗಳ ಮೆರವಣಿಗೆ ಸಮಯದಲ್ಲಿ ಮಹಾರಾಜರ ಸಾಧನೆಗಳು ಪ್ರತಿಬಿಂಬಿಸಲಿ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮೈಸೂರು ಮಹಾರಾಜರ ಇತಿಹಾಸ ಮತ್ತು ಸಾಧನೆಗಳನ್ನು ಸಾರುವ ಹಾಡುಗಳು ಮತ್ತು ನೃತ್ಯಗಳು ಪ್ರದರ್ಶನಗೊಳ್ಳಬೇಕು. ಆಗಿದ್ದರೆ ಮಾತ್ರ ಮುಂದಿನ ಪೀಳಿಗೆಗೆ ನಾವು ದಸರಾ ಆಚರಣೆ ಮಹತ್ವವನ್ನು ತಿಳಿಸಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ದಸರಾಕ್ಕೆ ಸಕಲ ಸಿದ್ಧತೆ:
ಚಾ.ನಗರ ದಸರಾ ಮಹೋತ್ಸವಕ್ಕೆ ಜಿಲ್ಲಾಧೀಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಸರ್ಕಾರಿ ಕಟ್ಟಡಗಳಿಗೆ ದೀಪಾಲಂಕಾರ ಮಾಡುವ ಕಾರ್ಯ ಬರದಿಂದ ಸಾಗಿದೆ. ಮೆರವಣಿಗೆ ಜಾನಪದ ಕಲಾತಂಡಗಳು ಮತ್ತು ಕಲಾವಿದರ ಆಯ್ಕೆ ನಡೆದಿದೆ. ಆಹಾರ ಮೇಳ, ರೈತ ದಸರಾ, ಮಹಿಳಾ ದಸರಾ, ಕವಿಗೋಷ್ಠಿ, ಮ್ಯಾರಾಥಾನ್, ಸ್ಥಬ್ಧಚಿತ್ರಗಳ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತಾಲೂಕು ವ್ಯಾಪ್ತಿಯಲ್ಲೂ ಗ್ರಾಮೀಣ ದಸರಾ ಮಹೋತ್ಸವ ಆಚರಣೆಗೆ ಜಿಲ್ಲಾಡಳಿತ ಅಗತ್ಯ ತಯಾರಿಯನ್ನು ಮಾಡಿಕೊಂಡಿದೆ.
ಈ ಹಿಂದೆ ದಸರಾ ಸಮಯದಲ್ಲಿ ಶ್ರೀಚಾಮರಾಜೇಶ್ವರ ದರ್ಬಾರೋತ್ಸವ ನಡೆಸಲಾಗುತ್ತಿತ್ತು. ದಸರಾ ಮಹೋತ್ಸವದ ವೇಳೆ ಅದನ್ನು ಮುಂದುವರಿಇಸಕೊಂಡು ಹೋದರೆ ಇಂದಿನ ತಲೆಮಾರಿನ ಜನರಿಗೆ ಅದನ್ನು ನೋಡುವ ಭಾಗ್ಯ ಸಿಗುತ್ತದೆ.-ರಾಮಕೃಷ್ಣ ಭಾರಧ್ವಜ್, ಅರ್ಚಕರು, ಶ್ರೀಚಾಮರಾಜೇಶ್ವರ ದೇವಾಲಯ, ಚಾಮರಾಜನಗರ. ಚಾಮರಾಜನಗರದ ಇತಿಹಾಸ, ರಾಜಮನೆತನದ ಕೊಡುಗೆಯನ್ನು ಜನಮಾನಸಕ್ಕೆ ಮುಟ್ಟುವ ನಿಟ್ಟಿನಲ್ಲಿ ಶ್ರೀಚಾಮರಾಜೇಶ್ವರ ದರ್ಬಾರೋತ್ಸವ ನಡೆಸುವುದು ಸೂಕ್ತ. ಈ ನಿಟ್ಟನಲ್ಲಿ ಮಹಾರಾಜರ ಸಾಧನೆ ದಸರಾ ಮಹೋತ್ಸವದಲ್ಲಿ ಅನಾವರಣಗೊಳ್ಳಲಿ.-ಹೇಮಂತ್ ಕುಮಾರ್, ಜಟ್ಟಿ, ವಜ್ರಮುಷ್ಠಿ ಅಖಾಡ, ಚಾಮರಾಜನಗರ.