ಜಿಲ್ಲೆ

ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

ಎ.ಎಸ್.ಮಣಿಕಂಠ

ಚಾಮರಾಜನಗರ: ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ನಿಲ್ಲಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳ ವತಿಯಿಂದ ಟಿಶ್ಯೂ ಪೇಪರ್ ಹಿಡಿದು ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗ ಮಂಗಳವಾರ ಜಮಾಯಿಸಿದ ಪ್ರತಿಭಟನಾಕಾರರು ಟಿಸ್ಯೂ ಪೇಪರ್ ಹಿಡಿದು, ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರ, ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವುದನ್ನು ಖಂಡಿಸಿ, ಒಂದು ತಿಂಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ರಾಜ್ಯದ ಜನತೆಗೆ ಮುಂದೆ ನೀರು ಇಲ್ಲದೆ ಟಿಶ್ಯೂ ಪೇಪರ್‌ನಲ್ಲಿ ಒರೆಸುವ ಪರಿಸ್ಥಿತಿ ಬರುತ್ತಿದೆ. ಕಾವೇರಿ ನೀರನ್ನೆಲ್ಲ ತಮಿಳುನಾಡಿಗೆ ಬಿಟ್ಟು ಮುಂದಿನ ದಿನಗಳಲ್ಲಿ ಜನತೆ ಮುಖ, ಕೈಕಾಲು ತೊಳೆಯಲಿಕ್ಕೆ, ಸ್ನಾನ ಮಾಡುವುದಕ್ಕೆ ಟಿಶ್ಯೂಪೇಪರ್ ಬಳಸಬೇಕಾಗುತ್ತದೆ ಎಂದರು.

ತಮಿಳುನಾಡಿನ ಶಾಸನಸಭೆಯಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಮತ್ತು ಸರ್ಕಾರ ನಿರ್ಣಯಕೈಗೊಂಡು ಕರ್ನಾಟಕ ಸರ್ಕಾರ ಕಾವೇರಿಯಲ್ಲಿ ನೀರಿಲ್ಲ ಎಂದು ಸುಳ್ಳು ಹೇಳುತ್ತಿದೆ. ಸಂಪೂರ್ಣ ನೀರು ಬಿಡುವಂತೆ ಒತ್ತಾಯ ಮಾಡಿರುವುದು ನಿಜಕ್ಕೂ ಅತ್ಯಂತ ಖಂಡನೀಯ. ಮುಂದಿನ ದಿನಗಳಲ್ಲಿ ತಮಿಳುನಾಡು, ಮುಖ್ಯಮಂತ್ರಿ ಸ್ಟಾಲಿನ್ ವಿರುದ್ದ ದೊಡ್ಡ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಶಾ.ಮುರಳಿ, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್‌ಗೋಪಾಲ್, ನಿಜಧ್ವನಿಗೋವಿಂದರಾಜು, ಮಹೇಶ್‌ಗೌಡ, ಚಾ.ಹ.ರಾಮು, ಡ್ಯಾನ್ಸ್ ಬಸವರಾಜು, ನಂಜುಂಡಸ್ವಾಮಿ, ಸೋಮವಾರಪೇಟೆ ಮಂಜು, ವರದನಾಯಕ, ವೀರಭದ್ರ, ರವಿಚಂದ್ರಪ್ರಸಾದ್ ಕಹಳೆ, ಗು.ಪುರುಷೋತ್ತಮ್, ತಾಂಡವಮೂರ್ತಿ ಭಾಗವಹಿಸಿದ್ದರು.