ಜಿಲ್ಲೆ

ಅ.29 ರಂದು ಸೇವಾದಳ ಶತಮಾನೋತ್ಸವ ಕಾರ್ಯಕ್ರಮ

ಎ.ಎಸ್.ಮಣಿಕಂಠ

ಚಾಮರಾಜನಗರ: ಕಾಂಗ್ರೆಸ್ ಸೇವಾ ದಳದ ರಾಜ್ಯಮಟ್ಟದ ಶತಮಾನೋತ್ಸವ ಕಾರ್ಯಕ್ರಮ ಅ. 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇವಾ ದಳದ ಪದಾಧಿಕಾರಿಗಳು ಭಾಗವಹಿಸುವಂತೆ ರಾಜ್ಯ ಸೇವಾ ದಳದ ಅಧ್ಯಕ್ಷ ಎಂ.ರಾಮಚಂದ್ರ ಮನವಿ ಮಾಡಿದರು.

ನಗರದ ಸತ್ತಿ ರಸ್ತೆಯಲ್ಲಿರುವ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸೇವಾದಳದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸ್ವತಾಂತ್ರ್ಯ ಪಡೆಯುವ ಉದ್ದೇಶದಿಂದ 1923ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳ ಸ್ಥಾಪನೆಯಾಯಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ್ ಸುಬ್ಬರಾವ್ ಹಡೇಗರ್ ಸೇವಾದಳವನ್ನು ಸ್ಥಾಪನೆ ಮಾಡಿದರು. ಈಗ ಸೇವಾ ದಳಕ್ಕೆ 100 ವರ್ಷಗಳು ಪೂರ್ಣಗೊಂಡಿದ್ದು, ಈ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೇವಾದಳದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆ, ಯುವನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಭಾಗವಹಿಸಲಿದ್ದಾರೆ. ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಜಿಲ್ಲೆಯ ಎಂಟು ಬ್ಲಾಕ್‌ಗಳಿಂದ ಸೇವಾದಳದ ಪದಾಧಿಕಾರಿಗಳೊಂದಿಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೆಂಗಳೂರಿಗೆ ಹೋಗಬೇಕು ಎಂದು ಮನವಿ ಮಾಡಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಸೇವಾದಳದ ಅಧ್ಯಕ್ಷ ಹೊಂಗನೂರು ಜಯರಾಜ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಆರ್.ಮಹದೇವ್, ಬ್ಲಾಕ್ ಅಧ್ಯಕ್ಷರಾದ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್, ತೋಟೇಶ್, ಜಿಲ್ಲಾ ಸೇವಾದಳದ ಉಪಾಧ್ಯಕ್ಷ ದೊಡ್ಡರಾಯಪೇಟೆ ಮೂರ್ತಿ, ತಾಲೂಕು ಅಧ್ಯಕ್ಷ ಶೇಷಣ್ಣ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ, ಸಹ ಕಾರ್ಯದರ್ಶಿ ಲಿಂಗಯ್ಯ, ಗುಂಡ್ಲುಪೇಟೆ ಬ್ಲಾಕ್ ಅಧ್ಯಕ್ಷ ಅಂಕಹಳ್ಳಿ ಮಹೇಂದ್ರ, ಬೇಗೂರು ಬ್ಲಾಕ್ ಅಧ್ಯಕ್ಷ ಹರವೆ ನಾಗೇಶ್, ಹನೂರು ಕೃಷ್ನ, ರಾಜು, ಕೊಳ್ಳೇಗಾಲದ ಸುರೇಶ್, ಚುಡಾ ಮಾಜಿ ಅಧ್ಯಕ್ಷ ಸುಹೇಲ್ ಆಲಿಖಾನ್, ಎಎಚ್‌ಎನ್ ಖಾನ್, ನಗರಸಭೆ ಸದಸ್ಯರಾದ ಚಿನ್ನಮ್ಮ, ನೀಲಮ್ಮ, ಜಿಲ್ಲಾ ಪತ್ರಿಕಾ ವಕ್ತಾರ ಅರುಣ್‌ಕುಮಾರ್ ಭಾಗವಹಿಸಿದ್ದರು.