ಜಿಲ್ಲೆ

ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಿ

ಎ.ಎಸ್.ಮಣಿಕಂಠ

ಚಾಮರಾಜನಗರ: ಶಿಕ್ಷಕರು ಆಸಕ್ತಿಯಿಂದ ಬೋಧನೆ ಮಾಡುವ ಮೂಲಕ ಸಮಾಜಕ್ಕೆ ಆಸ್ತಿಯಾಗುವಂತಹ ವಿದ್ಯಾರ್ಥಿಗಳನ್ನು ರೂಪಿಸಿ ಎಂದು ಮಾಜಿ ಉಪಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೆಗೌಡ ಸಲಹೆ ನೀಡಿದರು.

ನಗರದ ವರ್ತಕರ ಭವನದಲ್ಲಿ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಪಾಠವನ್ನು ಮನಮೆಚ್ಚಿ ಕೇಳುವಂತಾಗಬೇಕು. ಎಲ್ಲಾ ವಿದ್ಯಾರ್ಥಿಗಳನ್ನು ಗಮನಿಸಿ ಅವರ ಕಲಿಕೆಯ ಬಗ್ಗೆ ಅರ್ಥ ಮಾಡಿಸುವ ಇಚ್ಛಾಶಕ್ತಿ ಶಿಕ್ಷಕರಲ್ಲಿ ಇರಬೇಕು. ವಿದ್ಯಾರ್ಥಿಗಳು ಸದಾ ಅಧ್ಯಯನಶೀಲರಾಗಿರಬೇಕು. ತಂದೆ-ತಾಯಿ ಹಾಗೂ ಶಿಕ್ಷಕರಿಗೆ ಗೌರವ ಕೊಡುವಂತಹ ಮೌಲ್ಯಯುತ ಶಿಕ್ಷಣ ಪ್ರತಿಯೊಬ್ಬರಿಗೂ ದೊರೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಸಂಘಟನೆ ಹಾಗೂ ಇಲಾಖೆಯ ಸಮನ್ವಯತೆಯಿಂದ ಕೆಲಸ ಮಾಡಬೇಕಾಗಿದೆ ಎಂದರು.

ಶಿಕ್ಷಕರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಾವು, ನೀವೆಲ್ಲರು ಒಗ್ಗಟ್ಟಿನಿಂದ ಹೋರಾಟ ಮಾಡೋಣ. ಸಂಘಟನೆ ಶಕ್ತಿಯುತವಾಗಿರಬೇಕು. ಎನ್‌ಪಿಎಸ್ ಬದಲಿಸಿ, ಓಪಿಎಸ್‌ಅನ್ನು ಜಾರಿ ಮಾಡುವ ಬಗ್ಗೆ ನನ್ನ ಹೋರಾಟ ಸದನದ ಹೊರೆಗೆ ಹಾಗೂ ಒಳಗೆ ನಡೆಯುತ್ತಲೇ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಬಗ್ಗೆ ಗಮನ ಸೆಳೆದಿದ್ದೇವೆ. ಈ ವರ್ಷ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅನುದಾನ ಹೊಂದಾಣಿಕೆ ಕಾರಣದಿಂದ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷವು ಸಹ ಪ್ರಾಣಾಳಿಕೆಯಲ್ಲಿ ಘೋಷಣೆ ಮಾಡಿರುವಂತೆ ಮುಂದಿನ ವರ್ಷದ ಹಳೇ ಪಿಂಚಣಿ ಯೋಜನೆಯನ್ನು ಜಾರಿ ಮಾಡಲಿದೆ ಎಂದು ಹೇಳಿದರು.

ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ, ಶಿಕ್ಷಕರ ಸೇವೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸಂಘ ಮಾಡುತ್ತಿದೆ. ಸಂಘದ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸಲು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಹಾಂತೇಶ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದಮಲ್ಲಪ್ಪ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಣ್ಣ, ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಎಸ್.ಮಹದೇವಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ನಿಲಯ ಪಾಲಕ ಪೃಥ್ವಿರಾಜ್, ಸಂಘದ ಜಿಲ್ಲಾ ಕಾರ್ಯದರ್ಶಿ ಕಿರಣ್ ರಾಜ್, ಉಪಾಧ್ಯಕ್ಷ ಶಾಂತರಾಜು, ಆನಂದರಾಜು, ಖಜಾಂಚಿ ಮಹೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.