ಚಾಮರಾಜನಗರ: ಮಹಾತ್ಮ ಗಾಂಧಿಜೀಯವರ 154ನೇ ಜಯಂತಿ ಆಚರಣೆ ಅಂಗವಾಗಿ ಗಾಂಧಿ ಭವನ ಲೋಕಾರ್ಪಣೆಗೊಂಡಿತು. ಹಲವು ಧರ್ಮಗುರುಗಳು ಸರ್ವಧರ್ಮ ಸಂದೇಶ ಸಾರುವ ಮೂಲಕ ಗಾಂಧಿ ಜಯಂತಿಯನ್ನು ಅರ್ಥಪೂರ್ಣವಾಗಿ ನೆರವೇರಿಸಲಾಯಿತು.
ನಗರದ ಹೊರವಲಯದ ಯಡಬೆಟ್ಟದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ವಿಶೇಷ ಕಾರ್ಯಕ್ರಮಗಳು ಜರುಗಿದವು.
ವೇದಿಕೆ ಕಾರ್ಯಕ್ರಮದಲ್ಲಿ ಸರ್ವಧರ್ಮಗಳ ಪ್ರಾರ್ಥನೆ ನಡೆಯಿತು. ವಿವಿಧ ಧರ್ಮಗುರುಗಳಾದ ಸರ್ಪಭೂಷಣ ಸ್ವಾಮೀಜಿ, ಅಂತೋಣಿಸ್ವಾಮಿ, ಸೈಯ್ಯದ್ ಮುಕ್ತಾರ್, ಇಂದುಮತಿ ಸರ್ವಧರ್ಮ ಸಮನ್ವಯದ ಸಂದೇಶ ವಾಚಿಸಿದರು. ಭಾರತ ಹಲವು ಭಾಷೆ, ಸಂಸ್ಕೃತಿಗಳ ನೆಲೆವೀಡು. ಸರ್ವಧರ್ಮಗಳನ್ನು ಸಮಾನತೆಯಿಂದ ಕಾಣುವ ಏಕೈಕ ದೇಶ ಭಾರತವಾಗಿದೆ. ದೇಶವು ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದು ಅಹಿಂಸೆಯೆ ಪರಮಧರ್ಮವೆಂದು ವಿಶ್ವಕ್ಕೆಲ್ಲಾ ಸಾರಿತು. ಪುಸ್ತಕಗಳು ಹಾಗೂ ನಾಟಕಗಳಿಂದ ಪ್ರೇರಣೆಗೊಂಡ ಮಹಾತ್ಮ ಗಾಂಧೀಜಿ ಸತ್ಯ, ಅಹಿಂಸೆ, ಶಾಂತಿ, ಸಹಬಾಳ್ವೆ, ಸಾಮರಸ್ಯ ಹಾಗೂ ಸರಳ ಜೀವನದ ಸಂದೇಶಗಳನ್ನು ಸಾರಿದರು. ಅವರ ಜೀವನಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಸರ್ವಧರ್ಮಗುರುಗಳು ತಮ್ಮ ಸಂದೇಶದ ಮೂಲಕ ತಿಳಿಸಿದರು.
ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧಿಜೀ ಬದುಕು, ಬರಹ, ಸ್ವಾತಂತ್ರ್ಯ ಚಳವಳಿ, ಸರಳತೆ, ಅಹಿಂಸಾ ಮಾರ್ಗ, ಅಸ್ಪಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳ ಕುರಿತ ವಿಚಾರಗಳ ಬಗ್ಗೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಪುರಸ್ಕಾರ, ಪ್ರಮಾಣಪತ್ರವನ್ನು ವಿತರಣೆ ಮಾಡಲಾಯಿತು.
ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್‌ಪ್ರಕಾಶ್‌ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎ. ರಮೇಶ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಮಂಜುನಾಥ್, ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ವಾರ್ತಾ ಸಹಾಯಕ ಸಿ.ಸುರೇಶ್‌ಕುಮಾರ್ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗಾಂಧಿ ಭವನ ಉದ್ಘಾಟನೆ:
ರಾಷ್ಟ್ರಪಿತ ಮಹಾತ್ಮಗಾಂಧಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಾಣ ಮಾಡಿರುವ ನೂತನ ಗಾಂಧಿ ಭವನವನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದರು. ಗಾಂಧಿ ಭವನದಲ್ಲಿ ಪ್ರತಿಷ್ಠಾಪಿಸಿರುವ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿ ಗೌರವ ಸಲ್ಲಿಸಿದರು. ಗಾಂಧೀಭವನ ಕಟ್ಟಡದ ಲೋಕಾರ್ಪಣೆ ಸವಿನೆನಪಿಗಾಗಿ ಭವನದ ಅವರಣದಲ್ಲಿ ಗಣ್ಯರು ಗಿಡ ನೆಟ್ಟು ನೀರೆರೆದರು.
ಗಮನಸೆಳೆದ ಮಕ್ಕಳು:
ಗಾಂಧೀಜಯಂತಿ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರನಾಯಕರು ಹಾಗೂ ಸ್ವಾತಂತ್ರ್ಯ ಹೂರಾಟಗಾರರ ವೇಷಭೂಷಣ ಧರಿಸಿ ಮಕ್ಕಳು ಗಮನಸೆಳೆದರು. ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ನೆಹರು, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಒಬವ್ವ, ನೇತಾಜಿ ಸುಭಾಷ್ ಚಂದ್ರ ಬೋಸ್, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ರಾಷ್ಟ್ರನಾಯಕರು, ಸ್ವಾತಂತ್ರ್ಯ ಹೋರಾಟಗಾರರರನ್ನು ಅನುಕರಿಸುವ ವೇಷಭೂಷಣ ತೊಟ್ಟಿದ್ದ ಪುಟ್ಟಮಕ್ಕಳು ಗಾಂಧಿ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸಿದರು. ಗಾಂಧಿಪ್ರಿಯ ಗಾಯನಗಳ ಭಜನೆ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು.