ಜಿಲ್ಲೆ

ಶಿವಮೊಗ್ಗ ಗಲಾಟೆಗೆ ಸಿದ್ದರಾಮಯ್ಯ ಕುಮ್ಮಕ್ಕು

ಎ.ಎಸ್.ಮಣಿಕಂಠ

ಚಾಮರಾಜನಗರ: ಕಾಂಗ್ರೆಸ್ ಸರ್ಕಾರ ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಂ ಸಮುದಾಯವನ್ನು ಓಲೈಸುವ ಕೆಲಸವನ್ನು ಮಾಡುತ್ತಿದ್ದು, ಶಿವಮೊಗ್ಗ ಗಲಾಟೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮ್ಮಕ್ಕು ಇದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಔರಂಗಜೇಬನ ಖಡ್ಗ ಮೆರವಣಿಗೆ ಮಾಡಿ, ಖಡ್ಗದ ತುದಿಗೆ ರಕ್ತದ ಬಣ್ಣದಿಂದ ಹಿಂದೂಗಳ ರಕ್ತ ಬೀಳುತ್ತದೆ ಎಂದು ಉರ್ದುವಿನಲ್ಲಿ ಬರೆದಿದ್ದಾರೆ ಎನ್ನುವ ಮಾಹಿತಿ ಇದೆ. ಈ ಮೂಲಕ ಮುಸ್ಲಿಂ ಸಮುದಾಯದ ಮಾನಸಿಕತೆ ಏನು?
ರಾಜ್ಯವನ್ನು ಏನು ಮಾಡಲು ಹೊರಟಿದ್ದಾರೆ? ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ತೀಕ್ಷಣವಾಗಿ ಖಂಡಿಸಿದರು.

ಈದ್ ಮಿಲಾದ್ ಆಚರಣೆಯ ವೇಳೆ ಇಡೀ ಶಿವಮೊಗ್ಗವನ್ನು ಹಸಿರುಕರಣ ಮಾಡಿದ್ದಾರೆ. ಅಖಂಡ ಭಾರತವನ್ನು ಆಳಿದ ದೊರೆ ಔರಂಗಜೇಬ್ ಎಂದು ಬರೆದಿದ್ದಾರೆ. ಟಿಪ್ಪು ಮತ್ತು ಔರಂಗಜೇಬನ ಫೋಟೋ ಹಾಕಿದ್ದಾರೆ. ಈ ಮೂಲಕ ಹಿಂದೂಗಳ ಮರಣಹೋಮ ಮಾಡಿದವರನ್ನ ಪ್ರದರ್ಶನ ಮಾಡುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂರ ಆದರ್ಶ ಪುರುಷ ಮೊಹಮದ್ ಪೈಗಂಬರ್, ಅಬ್ದುಲ್ ಕಲಾಂ ಆಗಿದ್ದರೆ ನಮಗೆ ಖುಷಿಯಾಗುತ್ತಿತ್ತು. ಆದರೆ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಆದರ್ಶವಾಗಿಸಿಕೊಂಡು, ಖಡ್ಗ ಪ್ರದರ್ಶನ ಮಾಡುವ ಮೂಲಕ ಹಿಂದೂಗಳನ್ನು ಹೆದರಿಸಲು ಹೊರಟಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಸಚಿವ ಪರಮೇಶ್ವರ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಹಿಂದೂಗಳನ್ನು ಅಪಮಾನ ಮಾಡುವ ರೀತಿಯಲ್ಲಿ ಈದ್ ಮಿಲಾದ್ ಆಚರಣೆ ಮಾಡಲಾಗುತ್ತಿದೆ. ಶಿವಮೊಗ್ಗದ ಮುಸಲ್ಮಾನರ ಕೈಯಲ್ಲಿ ಕಲ್ಲು, ತಲವಾರುಗಳಿದ್ದವು. ಅದನ್ನೆಲ್ಲಾ ಯಾಕೆ ಪೊಲೀಸರು ಗಮನಿಸಲಿಲ್ಲ, ಸರ್ಕಾರ ಪೊಲೀಸರ ಕೈ ಕಟ್ಟಿಹಾಕಿದೆ. ಶಿವಮೊಗ್ಗ ಗಲಾಟೆ ಪೂರ್ವನಿಯೋಜಿತ ಎನ್ನುವ ವಿಚಾರ ಬೆಳಕಿಗೆ ಬರುತ್ತಿದೆ. ಈದ್ ಮಿಲಾದ್ ಒಂದೇ ದಿನ ನಡೆಯಬೇಕಿತ್ತು, ಆದರೆ ಒಂದು ದಿನ ಬಿಟ್ಟು ಮತ್ತೊಂದು ದಿನ ಮಾಡುತ್ತಿರುವುದರ ಹಿಂದೆ ಬೇರೆ ಜಿಲ್ಲೆಯವರು ಅಲ್ಲಿಗೆ ಬರಬೇಕು, ಗಲಾಟೆ ಆಗಬೇಕು ಎನ್ನುವ ಉದ್ದೇಶ ಅಡಗಿದೆ. ಕೇವಲ ಮುಸಲ್ಮಾನ ಸಮಾಜದಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆಯೇ. ಹಿಂದೂಗಳ ರಕ್ಷಣೆ ಮಾಡುವುದು ಯಾರು? ಕಾಂಗ್ರೆಸ್ ವೋಟ್ ಬ್ಯಾಂಕ್‌ಗಾಗಿ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ಈ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಟಿಪ್ಪು ಜಯಂತಿ ಶುರುಮಾಡಿದಾಗಲೂ ಈಗೇ ಆಗಿತ್ತು. ಕುಟ್ಟಪ್ಪನ ಹತ್ಯೆ ಆದಾಗ, ಅಲ್ಲಿ ಕೇವಲ ಮಡಿಕೇರಿ ಜನ ಇರಲಿಲ್ಲ. ಕೇರಳ, ಶಿವಮೊಗ್ಗ, ಮಂಗಳೂರು, ಭಟ್ಕಳದಿಂದ ಬಂದಿದ್ದರು. ಈಗಲೂ ಅದೇ ರೀತಿ ಆಗಿದೆ. ವಾಹನದಲ್ಲಿ ಹೊರಗಡೆಯಿಂದ ಜನರು ಬರುತ್ತಿದ್ದಾರೆ. ಮಡಿಕೇರಿಯ ಕುಟ್ಟಪ್ಪನ ಹತ್ಯೆಯಿಂದ ಶುರುವಾದ ಹತ್ಯೆಗಳು ಇನ್ನೂ ನಿಂತಿಲ್ಲ. ಬೇಜವಾಬ್ದಾರಿಯ ಸರಕಾರದಿಂದ ಹಿಂದೂಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದು ತುಘಲಕ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಉತ್ತರ ನೀಡಬೇಕು. ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು.