ಜಿಲ್ಲೆ

ಶಂಕರ್ ನಾಗ್ ಅದ್ಭುತ ಪ್ರತಿಭೆ

ಎ.ಎಸ್.ಮಣಿಕಂಠ

ಚಾಮರಾಜನಗರ: ಚಿತ್ರನಟ ಶಂಕರ್‌ನಾಗ್ ಚೈತನ್ಯ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದೆ ಎಂದು ಕೇಂದ್ರ ಪರಿಹಾರಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಜನಪದ ಪರಿಷತ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಶಂಕರ್ ನಾಗ್ ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟ ಕಳೆದ ಹಲವು ದಶಕಗಳಿಂದ ಶಂಕರ್ ನಾಗ್ ಕುರಿತು ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದ ಗಣ್ಯರಿಗೆ ಹಾಗೂ ಆಟೋ ಚಾಲಕರಿಗೆ ಗೌರವಿಸುವ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದೆ. ಈ ಮೂಲಕ ಸಮಾಜಕ್ಕೆ ಆದರ್ಶವಾದ ಕಾರ್ಯಗಳನ್ನು ಮಾಡುತ್ತಿದೆ. ಹಿರಿಯ ಸಾಧಕರ ಸ್ಮರಣೆ ಮೂಲಕ ಸರ್ವರೂ ಉತ್ತಮ ಹಾದಿಯಲ್ಲಿ ಸಾಗಲು ಸಹಕಾರಿಯಾಗಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಎನ್.ಋಗ್ವೇದಿ ಮಾತನಾಡಿ, ಶಂಕರ್ ನಾಗ್ ಅದ್ಭುತ ಪ್ರತಿಭೆ. ತನ್ನ ದೂರ ದೃಷ್ಟಿ, ವಿವೇಕ ದೃಷ್ಟಿಕೋನದಿಂದ ಹೆಮ್ಮರವಾಗಿ ಬೆಳೆದ ಮಹಾನ್ ಪ್ರತಿಭೆ. ತಂತ್ರಜ್ಞಾನವಿಲ್ಲದ ಕಾಲದಲ್ಲಿ ರೋಮಾಂಚನಕಾರಿಯಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಮೆಟ್ರೋ ಪರಿಕಲ್ಪನೆ ಶಂಕರ್ ನಾಗ್ ದೂರದೃಷ್ಟಿಯ ಚಿಂತನೆಯ ಫಲ. ಆಟೋ ರಾಜ ಚಲನಚಿತ್ರದ ಮೂಲಕ ಇಡೀ ಭಾರತದ ಆಟೋ ಮಾಲೀಕರು ಮತ್ತು ಚಾಲಕರಿಗೆ ಸಾಮಾಜಿಕ ಗೌರವವನ್ನು, ಕುಟುಂಬದ ಗೌರವವನ್ನು ಹೆಚ್ಚಿಸಿದ ಮಹಾನ್ ವ್ಯಕ್ತಿ ಶಂಕರ್ ನಾಗ್ ಎಂದರು.

ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ನಾಗ್ ಹರದನಹಳ್ಳಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜ ಯೋಗಿನಿ ಬಿ.ಕೆ.ದಾನೇಶ್ವರಿ, ಪ್ರಾಧ್ಯಾಪಕ ಜಯಣ್ಣ,ಉದ್ಯಮಿ ಜಯಸಿಂಹ, ಸುರೇಶ್ ಗೌಡ ,ಲಕ್ಷ್ಮೀನರಸಿಂಹ, ಆಟೋ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯಕ, ರಾಮಸಮುದ್ರದ ನಂಜುಂಡಸ್ವಾಮಿ, ಸಾಹಿದ ಬೇಗಂ, ರಂಗನಾಥ್, ಪದ್ಮಾಕ್ಷಿ ,ರವಿಚಂದ್ರ ಪ್ರಸಾದ್ , ಬಿ.ಕೆ.ಆರಾಧ್ಯ, ಶ್ರೀನಿವಾಸ್ ಗೌಡ, ಸರಸ್ವತಿ ,ಶಿವ ಮಲ್ಲೇಗೌಡ ,ರಾಮಣ್ಣ ಉಪಸ್ಥಿತರಿದ್ದರು.