ಚಾಮರಾಜನಗರ: ಕಾವೇರಿ ವಿಚಾರದಲ್ಲಿ ಕೈಗೊಂಡಿರುವ ರಾಜ್ಯ ಬಂದ್ ಯಶಸ್ವಿಗೊಳಿಸುವಂತೆ ವಿವಿಧ ಸಂಘಟನೆಗಳ ಮುಖಂಡರು ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಮನವಿ ಮಾಡಿದರೆ, ಇಲ್ಲೊಬ್ಬ ಕನ್ನಡಪರ ಹೋರಾಟಗಾರ ನೀರಿನ ಬಾಟಲಿ ವಿತರಣೆ ಮಾಡುವ ಮೂಲಕ ಗಮನಸೆಳೆದಿದ್ದಾರೆ.
ಜಿಲ್ಲೆಯಲ್ಲಿ ಕಾವೇರಿ ಹೋರಾಟ ಕ್ರಿಯಾ ಸಮಿತಿ ಚಾಮರಾಜನಗರ ಬಂದ್‌ಗೆ ಕರೆನೀಡಿರುವ ಹಿನ್ನೆಲೆಯಲ್ಲಿ ಜೈ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಜಿ.ಬಂಗಾರು ಗುರುವಾರ ನಗರದ ಪ್ರಮುಖ ಅಂಗಡಿಗಳಿಗೆ ತೆರಳಿ ನೀರಿನ ಬಾಟಲಿ ವಿತರಣೆ ಮಾಡುವ ಮೂಲಕ ರಾಜ್ಯ ಬಂದ್ ಯಶಸ್ವಿಗೊಳಿಸಬೇಕು ಎಂದು ವರ್ತಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾವೇರಿ ಮತ್ತು ಕಬಿನಿ ನೀರು ನಮ್ಮ ಪಾಲಿಗೆ ಮಾತೃಸಮಾನವಾಗಿದೆ. ನಮಗೆ ಕಾವೇರಿ ಬರಿಯ ನೀರಾಗಿಲ್ಲ, ನಮ್ಮೆಲ್ಲರ ಭಾವನೆಯಾಗಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ಮುಂದಿನದಿನಗಳಲ್ಲಿ ಕುಡಿಯುವ ನೀರಿಗೆ ಅಹಾಕಾರ ಉಂಟಾಗಲಿದೆ ಎಂಬುದನ್ನು ಸಾಮಾನ್ಯರಿಗೆ ಮನವರಿಕೆ ಮಾಡಕೊಡುವ ಉದ್ದೇಶದಿಂದ ನಗರದ ವರ್ತಕರಿಗೆ ನೀರಿನ ಬಾಟಲಿ ಕೊಟ್ಟು ಬಂದ್‌ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಸುರೇಶ್, ಸೋಲಾರ್ ಪರಮೇಶಿ, ಕೆಂಪಣ್ಣ, ಶಶಿಕುಮಾರಿ, ಮಧುಮಿತ, ಕೃಷ್ಣ, ನವೀನ್ ಹಾಗೂ ಇತರರು ಹಾಜರಿದ್ದರು.