ಚಾಮರಾಜನಗರ: ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಮೊಲಿಬಿಟಿ ಇಂಡಿಯಾಗೆ ರೋಟರಿ ಸಂಸ್ಥೆ ಎಲ್ಲ ರೀತಿಯ ಸಹಕಾರ ಕೊಡಲು ಸಿದ್ದವಿದೆ ಎಂದು ರೋಟರಿ ಜಿಲ್ಲಾ ತರಬೇತುದಾರ ಡಾ.ನಾಗಾರ್ಜುನ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಮೊಬಿಲಿಟಿ ಇಂಡಿಯಾ ಮತ್ತು ರೋಟರಿ ಸಂಸ್ಥೆಯ ವತಿಯಿಂದ ಬುಧವಾರ ಆಯೋಜಿಸಿದ್ದ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳ ಪೋಷಕರಿಗೆ ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮೊಲಿಬಿಲಿ ಇಂಡಿಯಾ ಸಂಸ್ಥೆಯು ಚಾಮರಾಜನಗರ ತಾಲೂಕಿನಲ್ಲಿ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳನ್ನು ಗುರುತಿಸಿ ನೀಡುತ್ತಿರುವ ಸೌಲಭ್ಯಗಳನ್ನು ಸಮಸ್ಯೆಯುಳ್ಳ ಎಲ್ಲ ಮಕ್ಕಳು ಬಳಸಿಕೊಂಡು ಎಲ್ಲ ಮಕ್ಕಳಂತೆ ಬದುಕುವಂತಾಗಲಿ. ಇದರಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗಿದೆ. ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ಬದುಕಲ್ಲಿ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಮೊಬಿಲಿಟಿ ಇಂಡಿಯಾಗೆ ರೋಟರಿ ಸಂಸ್ಥೆ ಎಲ್ಲಾ ರೀತಿಯ ಸಹಕಾರಕೊಡಲು ಸಿದ್ದವೆಂದು ಭರವಸೆ ನೀಡಿದರು.
ಮೊಲಿಬಿಲಿ ಇಂಡಿಯಾ ಕಾರ್ಯಕ್ರಮ ಸಂಯೋಜಕ ರಾಜಣ್ಣ ಮಾತನಾಡಿ, ತಾಲೂಕಿನ ತೆರಕಣಾಂಬಿ ಹೋಬಳಿ ಒಳಗೊಂಡಂತೆ 18 ವರ್ಷದೊಳಗಿನ ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಹಾಗೂ ದೈಹಿಕ ನ್ಯೂನ್ಯತೆಯುಳ್ಳ 600ಕ್ಕೂ ಹೆಚ್ಚು ಮಕ್ಕಳನ್ನು ಗುರುತಿಸಿಲಾಗಿದೆ. ಈ ವ್ಯಾಪ್ತಿಗೆ ಬರುವ 6 ಹೋಬಳಿಗಳಲ್ಲಿ ವ್ಯಾಯಾಮ ಕೇಂದ್ರಗಳನ್ನು ತೆರೆದು, ಸಮಸ್ಯೆಯುಳ್ಳ ಮಕ್ಕಳಿಗೆ ವ್ಯಾಯಾಮ, ದಿನನಿತ್ಯದ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ ಅಗತ್ಯೆಯುಳ್ಳ ಮಕ್ಕಳಿಗೆ ಸಾಧನಸಲಕರಣೆ ವಿತರಿಸಲಾಗುತ್ತಿದೆ ಎಂದರು.
ಮೈಸೂರು ಬಿಂಬ ವಾಕ್ ಮತ್ತು ಶ್ರವಣ ಕೇಂದ್ರದ ಪ್ರಧಾನ ಶ್ರವಣ ತಜ್ಞ ಗಗನ್, ರೋಟರಿ ಸಂಸ್ಥೆಯ ಅಧ್ಯಕ್ಷ ಸಿ.ಎನ್.ಚಂದ್ರಪ್ರಭಜೈನ್, ಕಾರ್ಯದರ್ಶಿ ಅಬ್ದುಲ್‌ಅಜೀಜ್ (ದೀನಾ), ಮಾಜಿ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ರಾಮಸಮುದ್ರ ನಾಗರಾಜು, ಅಂಕ ಶೆಟ್ಟಿ, ಪ್ರಕಾಶ್, ಮೈಸೂರು ಬಿಂಬ ವಾಕ್ ಮತ್ತು ಶ್ರವಣ ಕೇಂದ್ರ ಸಂಪನ್ಮೂಲ ವ್ಯಕ್ತಿ ನಿತ್ಯಾಶ್ರೀ ಹಾಗೂ ಇತರರು ಭಾಗವಹಿಸಿದ್ದರು.