ಚಾಮರಾಜನಗರ: ಕಳೆದ ಸಾಲಿನಲ್ಲಿ ಶ್ರೀ ಚಾಮರಾಜೇಶ್ವರ ರೈತ ಮೀನು ಉತ್ಪಾದಕರ ಕಂಪನಿ 45 ಸಾವಿರದ 970 ರೂ.ಲಾಭ ಗಳಿಸಿದೆ ಎಂದು ಕಂಪನಿಯ ಅಧ್ಯಕ್ಷ ಕೆ.ಲಿಂಗರಾಜು ತಿಳಿಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿರುವ ಹಾಪ್ಸ್‌ಕಾಮ್ಸ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಚಾಮರಾಜೇಶ್ವರ ರೈತ ಮೀನು ಉತ್ಪಾದಕರ ಕಂಪನಿಯ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಂಪನಿ ಸ್ಥಾಪನೆಗೊಂಡು ಎರಡು ವರ್ಷ ಪೂರೈಸಿದ್ದು, ಸರ್ಕಾರದ ಅನುದಾನ ಹಾಗೂ 367 ಸದಸ್ಯರ ಷೇರಿನಿಂದ ಕಂಪನಿ ನಡೆಸಲಾಗುತ್ತಿದೆ. ಈಗಾಗಲೇ ಹೆಬ್ಬಳ್ಳ ಮತ್ತು ಮರಗದ ಕೆರೆಗಳಿಗೆ ಮೀನು ಮರಿಗಳನ್ನು ಬಿಡಲಾಗಿದ್ದು, ಶಿಕಾರಿ ಹಂತಕ್ಕೆ ಬಂದಿವೆ. ಸದಸ್ಯರ ಸಂಖ್ಯೆ ಹೆಚ್ಚಿಸಿಕೊಂಡು ಸರ್ಕಾರದ ಸಹಾಯದೊಂದಿಗೆ ಕಂಪನಿಯನ್ನು ಎತ್ತರಕ್ಕೆ ಬೆಳೆಸಲು ಎಲ್ಲರ ಸಹಕಾರ ಅಗತ್ಯ ಎಂದರು.
ನಗರದಲ್ಲಿ ಮೀನು ಮಾರಾಟ ಕೇಂದ್ರವನ್ನು ತೆರೆಯಲು ನಗರಸಭೆ 20*20 ಅಳತೆಯ ನಿವೇಶನವನ್ನು ನೀಡಲಾಗಿದ್ದು, ಸದ್ಯದಲ್ಲೇ 10 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಸರ್ಕಾರದಿಂದ 4 ಲಕ್ಷ ರೂ. ಸಹಾಯಧನ ಸಿಗಲಿದೆ ಎಂದು ತಿಳಿಸಿದರು. ಮೀನುಗಾರರ ಆರ್ಥಿಕ ಮಟ್ಟ ಸುಧಾರಿಸಲು ಹಾಗೂ ಅವರ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಸೇರಿದಂತೆ ಇತರ ಎಲ್ಲ ಸಮಸ್ಯೆಗಳನ್ನು ದೂರ ಮಾಡಲು ಕಂಪನಿ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಭರವಸೆ ನೀಡಿದರು.
ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ನಂಜುಂಡಸ್ವಾಮಿ 2023-24ನೇ ಸಾಲಿನ 24 ಲಕ್ಷ 84 ಸಾವಿರ ರೂ.ನ ಬಜೆಟ್ ಮಂಡಿಸಿ, ಅನುಮೋದನೆ ಪಡೆದರು. ಕಂಪನಿ ಆಡಳಿತ ಮಂಡಳಿ ನಿರ್ದೆಶಕರಾದ ಕೆ.ಕೆ.ರಂಗರಾಜು, ಆರ್.ಕೆಂಪರಾಜು, ಎಸ್.ಬಸವಶೆಟ್ಟಿ ಚಿಕ್ಕಣ್ಣ, ಗುರುಸಿದ್ದಶೆಟ್ಟಿ, ಸಿದ್ದರಾಜು, ಪುಟ್ಟರಾಜನಾಯಕ, ಸಿ.ಕೆ.ಉಷಾ, ಸಣ್ಣಮ್ಮ ಮೈರಾಡ ಸಂಸ್ಥೆಯ ಅಜ್ಮಲ್ ಪಾಷಾ, ಡೇಟಾ ಎಂಟ್ರಿ ಆಪರೇಟರ್ ಧೀಮಂತ್ ಇದ್ದರು.