ಕೊಳ್ಳೇಗಾಲ : ವಾರಕ್ಕೊಂದು ಬಾಡಿಗೆ ಸಿಗದ ಪರಿಸ್ಥಿತಿ, ಏರಿಕೆ ಕಾಣುತ್ತಲೇ ಇರುವ ರೋಡ್ ಟ್ಯಾಕ್ಸ್ ನಡುವೆ ದುಸ್ಥರವಾಗಿರುವ ಕುಟುಂಬ ನಿರ್ವಹಣೆ..
ಪಟ್ಟಣದ ಕೆಎಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ಕಾರು, ಕ್ಯಾಬ್ ನಿಲ್ದಾಣದಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾಯಕ ಸಮಾಜ ಸಂವಾದ ಕಾರ್ಯಕ್ರಮವನ್ನು ಕಾರು, ಮ್ಯಾಕ್ಸಿಕ್ಯಾಬ್, ಟಿಟಿ ಮತ್ತು ಮಿನಿ ಬಸ್ ಚಾಲಕರು ಹಂಚಿಕೊಂಡು ನೋವಿನ ನುಡಿಗಳಿವು.
ಶ್ರೀಮಹಾಗಣಪತಿ ಕಾರು ಮಾಲೀಕರು ಮತ್ತು ಚಾಲಕರ ಸಂಘದ ಮಾಜಿ ಅಧ್ಯಕ್ಷ ಆರ್.ಮನೋಹರ್ ಸಂವಾದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಸ್ಥಿತಿಯಲ್ಲಿ ಕಾರು ಮತ್ತು ಮ್ಯಾಕ್ಸಿಕ್ಯಾಬ್ ಗಳನ್ನು ಬಾಡಿಗೆಗೆ ಕರೆಯುವರ ಸಂಖ್ಯೆ ಕಡಿಮೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ನಾವೆಲ್ಲರೂ ಸಾಕಷ್ಟು ಸಂಕಷ್ಟ ಅನುಭವಿಸಿದ್ದೆವು. ಈಗ ಮತ್ತಷ್ಟು ಸಮಸ್ಯೆಗೆ ಸಿಲುಕಿದ್ದೇವೆ ಎಂದು ನೋವು ತೋಡಿಕೊಂಡರು.
ಶ್ರೀಮಹಾಗಣಪತಿ ಕಾರು ಮಾಲೀಕರು ಮತ್ತು ಚಾಲಕರ ಸಂಘದಲ್ಲಿ 50ಕ್ಕೂ ಹೆಚ್ಚು ಕಾರುಗಳಿದೆ. ಶ್ರೀವಿನಾಯಕ ಮ್ಯಾಕ್ಸಿಕ್ಯಾಬ್ ಮಾಲೀಕರು ಮತ್ತು ಚಾಲಕರ ಸಂಘದಲ್ಲಿ 60ಕ್ಕೂ ಹೆಚ್ಚು ಕ್ಯಾಬ್‌ಗಳಿದೆ. ಒಟ್ಟಾರೆ ಈ ನಿಲ್ದಾಣದಲ್ಲಿ 120 ಕ್ಕೂ ಹೆಚ್ಚು ವಾಹನಗಳು ಇದ್ದು, ಕಾರು ನಿಲುಗಡೆಗೆ ಸೂಕ್ತವಾದ ಜಾಗವೇ ಇಲ್ಲದಂತಾಗಿದೆ. ಜನಪ್ರತಿನಿಧಿಗಳು ಹಾಗೂ ನಗರಸಭೆ ಗಮನಹರಿಸಿ ನಮಗೆ ಶಾಶ್ವತ ಜಾಗ ಒದಗಿಸಿಕೊಟ್ಟರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ನಮ್ಮ ನೋವುಗಳನ್ನು ಹಂಚಿಕೊಳ್ಳಲು ವೇದಿಕೆ ರೂಪಿಸಿರುವುದು ಅತ್ಯಂತ ಸಹಕಾರಿಯಾಗಿದೆ ಎಂದರು.
ಸಂವಾದದಲ್ಲಿ ಟಿಟಿ ಚಾಲಕರಾದ ರಾಮು, ಪ್ರಶಾಂತ್, ಫೈರೋಜ್ ಖಾನ್, ಮಹಾದೇವ್, ಗಿರೀಧರ್, ಶ್ರೀನಿವಾಸ್, ಮಂಜು, ಕುಮಾರ್, ದೀಪು, ಗಿರೀಶ್, ಮುಕುಂದ, ಶಿವಪ್ರಸಾದ್, ಮೊಳಗನಕಟ್ಟೆರಾಜು, ಕಾರು ಚಾಲಕರಾದ ರಾಚನಾಯ್ಕ, ನಿಂಗರಾಜು, ಶ್ರೀನಿವಾಸ್, ಕೃಷ್ಣ, ನಾಗರಾಜು, ಶಿವು, ಮುಳ್ಳೂರು ನಾಗರಾಜ್, ಸಿದ್ದರಾಜು, ನವೀನ್, ರಾಜು, ಜೋಗಿ, ಜೋಶಿ ಹಾಗೂ ಇತರರು ಭಾಗವಹಿಸಿದ್ದರು.
ದುಸ್ತರವಾದ ಬದುಕು:
ಪಟ್ಟಣದ ಕಾರು, ಮ್ಯಾಕ್ಸಿಕ್ಯಾಬ್ ಹಾಗೂ ಮಿನಿಬಸ್ ಚಾಲಕರು ಸಾಕಷ್ಟು ಬಡ ಕುಟುಂಬಗಳಿಂದಲೇ ಬಂದಿದ್ದಾರೆ. ಸುಮಾರು 4 ತಿಂಗಳಿಂದ ವಾರಕ್ಕೆ ಒಂದು ಬಾಡಿಗೆಯೂ ಸಿಗುತ್ತಿಲ್ಲ. ಹಲವು ಮಾಲೀಕರು ಮತ್ತು ಚಾಲಕರು ಕಾರುಗಳನ್ನು ಮಾರಾಟ ಮಾಡಿಕೊಂಡು ಹೋಗುತ್ತಿದ್ದಾರೆ. ಕಾರನ್ನು ಶುಚಿಯಾಗಿ ಇಟ್ಟುಕೊಳ್ಳುವ ನಾವು, ನಮ್ಮ ಕುಟುಂಬ ನಿರ್ವಹಣೆಗೆ ಹೆಣಗಾಡುವಂತಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರನ್ನು ನಿಲ್ದಾಣದಲ್ಲಿ ನಿಲ್ಲಿಸಿ ವಾಪಸ್ಸು ಹೋಗುತ್ತಿದ್ದೇವೆ. ಮಡದಿಯ ಚಿನ್ನ ಅಡವಿಟ್ಟು ಟ್ಯಾಕ್ಸ್ ಕಟ್ಟುತ್ತಿದ್ದೇವೆ. ನಮ್ಮ ಮಕ್ಕಳಿಗೆ ಸೂಕ್ತ ವಿಧ್ಯಭ್ಯಾಸ ಕೊಡಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ನೋವಿನ ನುಡಿಗಳು ಸಂವಾದದಲ್ಲಿ ಕೇಳಿಬಂದಿತು.
ರೋಡ್‌ಟ್ಯಾಕ್ಸ್ ಹೊರೆ:
ಕಾರು ಮತ್ತು ಮ್ಯಾಕ್ಸಿ ಕ್ಯಾಬ್ ಗಳಿಗೆ ಮೂರು ತಿಂಗಳಿಗೆ ಒಮ್ಮೆ 5500 ರೂ. ರೋಡ್‌ಟ್ಯಾಕ್ಸ್ ಮತ್ತು 35.000 ರೂ. ಇನ್ಸೂರೆನ್ಸ್ ಕಟ್ಟಬೇಕಿದೆ. ಮಿನಿ ಬಸ್‌ಗಳಿಗೆ ಮೂರು ತಿಂಗಳಿಗೆ ಒಮ್ಮೆ 16,000 ರೂ. ರೋಡ್‌ಟ್ಯಾಕ್ಸ್, ವರ್ಷಕ್ಕೆ 43,000 ಇನ್ಸೂರೆನ್ಸ್ ಕಟ್ಟಬೇಕಿದೆ. ಇಂತಹ ಪರಿಸ್ಥಿತಿಯ ನಡುವೆ ಸರಿಯಾಗಿ ಬಾಡಿಗೆ ಸಿಗದೇ ರೋಡ್‌ಟ್ಯಾಕ್ಸ್ ಹೊರೆಯಿಂದ ಕಾರು ಮಾಲೀಕರು ಮತ್ತು ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಸರ್ಕಾರ ನಮ್ಮ ಬಗ್ಗೆ ಗಮನಹರಿಸಿ ಸ್ವಲ್ಪವಾದರೂ ಟ್ಯಾಕ್ಸ್ ಹೊರೆ ತಗ್ಗಿಸಿದರೆ ಅನುಕೂಲವಾಗುತ್ತದೆ ಎಂದು ಶ್ರೀವಿನಾಯಕ ಮ್ಯಾಕ್ಸಿಕ್ಯಾಬ್ ಮಾಲೀಕರು ಮತ್ತು ಚಾಲಕರ ಸಂಘದ ಗೌರವಾಧ್ಯಕ್ಷ ಬಸವಣ್ಣ ಮನವಿ ಮಾಡಿದರು.
ಶಕ್ತಿ ಯೋಜನೆ ಹೊಡೆತ:
ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಕಾರು ಚಾಲಕರು ಈ ವೃತ್ತಿಯನ್ನು ತೊರೆದಿದ್ದರು. ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ದಿನಗಳಿಂದ ಕಾರು, ಮ್ಯಾಕ್ಸಿಕ್ಯಾಬ್ ಗಳನ್ನು ಬಾಡಿಗೆ ಕೇಳುವವರೇ ಇಲ್ಲದಂತಾಗಿದೆ. ಈ ಭಾಗದ ಮಲೆ ಮಹದೇಶ್ವರ ಬೆಟ್ಟ, ಭರಚುಕ್ಕಿ ಹಾಗೂ ಇನ್ನಿತರೆ ಪ್ರವಾಸಿ ತಾಣಗಳಿಗೆ ಕಾರು ಬಾಡಿಗೆಗೆ ಪಡೆಯುವವರ ಸಂಖ್ಯೆ ಹೆಚ್ಚಾಗಿತ್ತು. ಈಗ ನಾವೇ ಕೇಳಿದರೂ ಯಾರು ಬಾಡಿಗೆಗೆ ಬರುತ್ತಿಲ್ಲ. ಸರ್ಕಾರ ಯೋಜನೆಗಳನ್ನು ರೂಪಿಸುವಾಗ ನಮ್ಮಂತವರನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಶ್ರೀಮಹಾಗಣಪತಿ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಕಾರ್ಯದರ್ಶಿ ಪ್ರಭುದೇವ್ ಹಾಗೂ ಖಜಾಂಚಿ ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು.
ಸೂಕ್ತ ಜಾಗ ಕಲ್ಪಿಸಿ:
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಇರುವ ಗಣಪತಿ ದೇವಸ್ಥಾನದ ಹಿಂಭಾಗ ನಮ್ಮ ಕಾರು ಮಾಲೀಕರು ಮತ್ತು ಚಾಲಕರ ಸಂಘಕ್ಕೆ ಜಾಗ ನೀಡಲಾಗಿತ್ತು. ನೂತನ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ 2019 ರಲ್ಲಿ ಅಂದಿನ ಶಾಸಕರಾಗಿದ್ದ ಎಸ್.ಜಯಣ್ಣ ಅವರು, ಕೆರೆಗೆ ಹೋಗುವ ರಸ್ತೆಯಲ್ಲಿ ಕಾರು ನಿಲ್ದಾಣ ಮಾಡಿಕೊಳ್ಳಲು ಸೂಚಿಸಿದ್ದರು. ಈ ಜಾಗ ನಗರಸಭೆಗೆ ಸೇರಿದ್ದು, ನಮ್ಮ ಕಾರು ಚಾಲಕರ ಸಂಘದ್ದು ಎಂದು ಹೇಳಿಕೊಳ್ಳಲು ಜಾಗವೇ ಇಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ನಮ್ಮ ಸಂಘಕ್ಕೆ ಸೂಕ್ತ ಜಾಗವನ್ನು ಒದಗಿಸಿಕೊಡಬೇಕು ಎಂದು ಸಂಘದ ಮಾಜಿ ಖಜಾಂಚಿ ಎಂ.ರಾಜಶೇಖರ್ ಮನವಿ ಮಾಡಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಕೆರೆಗೆ ಹೋಗುವ ರಸ್ತೆಯಲ್ಲಿ ತಾತ್ಕಾಲಿಕವಾಗಿ ಕಾರು ಮತ್ತು ಕ್ಯಾಬ್‌ಗಳನ್ನು ನಿಲ್ಲಸುತ್ತಿದ್ದೇವೆ. ನಮ್ಮ ಸಂಘಕ್ಕೆ ಸೂಕ್ತವಾದ ಜಾಗವನ್ನು ನೀಡಿದರೆ ಅನುಕೂಲವಾಗುತ್ತದೆ.-ಎಂ.ರಾಜಶೇಖರ್, ಮಾಜಿ ಖಜಾಂಚಿ, ಕಾರು ಮಾಲೀಕರು ಮತ್ತು ಚಾಲಕರ ಸಂಘ, ಕೊಳ್ಳೇಗಾಲ. ಸರ್ಕಾರದ ಮಟ್ಟದಲ್ಲಿ ರೋಡ್‌ಟ್ಯಾಕ್ಸ್ ಹೊರೆಯನ್ನು ಕಡಿಮೆ ಮಾಡಿದರೆ ಸಾಕು, ಆದರೆ ದಿನೇ ದಿನೇ ಟ್ಯಾಕ್ಸ್ ಏರಿಕೆ ಮಾಡುತ್ತಿದ್ದಾರೆ. ಗಗನಕ್ಕೆ ಏರಿರುವ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ನಮ್ಮ ಬದುಕು ದುಸ್ತರವಾಗಿದೆ.-ಪ್ರಭುದೇವ್, ಕಾರ್ಯದರ್ಶಿ, ಕಾರು ಮಾಲೀಕರು ಮತ್ತು ಚಾಲಕರ ಸಂಘ, ಕೊಳ್ಳೇಗಾಲ.