ಚಾಮರಾಜನಗರ: ಕನ್ನಡ ನೆಲ, ಭಾಷೆಗಾಗಿ ವಾಟಾಳ್ ನಾಗರಾಜ್ ನಡೆಸಿದ ಹೋರಾಟ ಜಗತ್ತಿನಲ್ಲಿ ದಾಖಲಾಗುವಂತದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.
ನಗರದ ಜಿಲ್ಲಾ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ , ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ, ಶ್ರೀಗಂಧ ಕನ್ನಡ ಯುವಕರ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ವಾಟಾಳ್ ಕನ್ನಡ ಚಳುವಳಿ ಮತ್ತು ವಿಚಾರಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಂಸ್ಕೃತಿ ,ಪರಂಪರೆ ,ನೆಲ, ಜಲ, ಭಾಷೆಯ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿರುವ ವಾಟಾಳ್ ನಾಗರಾಜ್ ಸೇವೆ ಅಪಾರವಾಗಿದೆ. ಶ್ರೇಷ್ಠ ಸಂಸದೀಯ ಪಟುವಾಗಿ, ಶಾಸನ ಸಭೆಯ ಸದಸ್ಯರಾಗಿ ಸುಧೀರ್ಘವಾಗಿ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಸದನಕ್ಕೆ ಎಂದಿಗೂ ಗೈರು ಹಾಜರಾಗದ ವಾಟಾಳ್‌ನಾಗರಾಜ್ ಭಾಷಣದ ಶೈಲಿ ಅಮೋಘವಾಗಿತ್ತು. ಅವರ ಚಿಂತನೆ ಹಾಗೂ ಹೋರಾಟವನ್ನು ಎಂದಿಗೂ ಮರೆಯಲಾಗದು ಎಂದರು.
ಹೋರಾಟಗಾರ ಚಾ.ರಂ.ಶ್ರೀನಿವಾಸ್‌ಗೌಡ ಮಾತನಾಡಿ, ಚಾಮರಾಜನಗರ ಜಿಲ್ಲಾ ಕೇಂದ್ರವಾಗಲು, ಜಿಲ್ಲೆಗೆ ಕುಡಿಯುವ ನೀರು ತರಲು ಅವರೇ ಕಾರಣಕರ್ತರು. ಕನ್ನಡ ನಾಡು, ನುಡಿಗೆ ಅವರು ಮಾಡಿದ ಹೋರಾಟ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಸುಧೀರ್ಘ ಕನ್ನಡದ ಹೋರಾಟವನ್ನು ಪರಿಗಣಿಸಿ ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಕರ್ನಾಟಕ ರತ್ನ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹೋರಾಟಗಾರ ಪುರುಷೋತ್ತಮ್, ನಿಜಧ್ವನಿಗೋವಿಂದರಾಜು, ಜನಪದ ಜ.ಸುರೇಶ್‌ನಾಗ್, ಶ್ರೀಗಂಧ ಕನ್ನಡ ಸಂಘದ ಅಧ್ಯಕ್ಷ ರವಿಚಂದ್ರ ಪ್ರಸಾದ್, ಪಣ್ಯದಹುಂಡಿ ಪುಟ್ಟಸ್ವಾಮಿ, ಕುಮಾರ್, ದೊಡ್ಡರಾಯಪೇಟೆ ನಾಗಣ್ಣ, ಮಹದೇವ, ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಿ ಸರಸ್ವತಿ ಉಪಸ್ಥಿತರಿದ್ದರು.