ಚಾಮರಾಜನಗರ: ಕ್ರಿಯಾಶಕ್ತಿ ಮತ್ತು ಜ್ಞಾನ ಶಕ್ತಿ ಸಂಯೋಜನೆಗೊಂಡು ಸಾಗಿದಾಗ ಸಾಧನೆಯ ಹಾದಿ ಸುಲಭ ಎಂದು ಹಾಸನ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಟಿ.ಸಿ.ತಾರಾನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವ ವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಮಾರೋಪ ಸಮಾರಂಭ ಹಾಗೂ ಸುವರ್ಣ ಸಂಭ್ರಮ- 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಕಾಶಕ್ಕೆ ಅಂತ್ಯವೇ ಇಲ್ಲದಂತೆ, ಯಾವುದೇ ವ್ಯಕ್ತಿ ಎಷ್ಟು ಸಾಧನೆಯನ್ನಾದರೂ ಮಾಡಬಹುದು. ಮನುಷ್ಯನ ಮಾನಸಿಕ ಶಕ್ತಿಗೆ ಯಾವುದೇ ಮಿತಿ ಇಲ್ಲ. ಆದರೆ ಕ್ರೀಡೆ, ಸಂಗೀತ, ನೃತ್ಯ ಹಾಗೂ ಇನ್ನಿತರೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕಾದರೆ ಮನಸ್ಸಿನ ಕೇಂದ್ರೀಕರಣ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಣದ ಜತೆಗೆ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕು ಎಂದು ಸಲಹೆ ನೀಡಿದರು.
ಜಗತ್ತಿನ ಎಲ್ಲಾ ಚಟುವಟಿಕೆಗಳಿಗೂ ಮಾನವನ ಮನಸ್ಸೇ ಮೂಲವಾಗಿದೆ. ಇಲ್ಲಿ ಯಾರು ಯಾರನ್ನು ದೊಡ್ಡವರು ಮಾಡಲು ಸಾಧ್ಯವಿಲ್ಲ, ನಿಮ್ಮ ಬುದ್ಧಿಶಕ್ತಿಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಉನ್ನತ ಸ್ಥಾನ ಪಡೆಯಬೇಕು. ಪ್ರಾಕೃತಿಕವಾಗಿ ಅಗಾಧ ಸಂಪನ್ಮೂಲವನ್ನು ಒಳಗೊಂಡಿರುವ ಚಾಮರಾಜನಗರ ವಿಶ್ವ ವಿದ್ಯಾಲಯದಲ್ಲಿ ಕ್ರಿಯಾಶೀಲ ಕುಲಪತಿ ಹಾಗೂ ಬೋಧಕ ವರ್ಗದವರು ಇದ್ದಾರೆ. ಜಾಗತಿಕ ಮಟ್ಟದಲ್ಲಿ ಈ ವಿಶ್ವ ವಿದ್ಯಾಲಯಕ್ಕೆ ಭದ್ರ ಬುನಾದಿ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮಾತನಾಡಿ, ವಿದ್ಯಾರ್ಥಿಗಳು ತಾವು ಏನಾದರೂ ಸಾಧಿಸಬೇಕು ಎಂಬ ಗುರಿ ಇಟ್ಟುಕೊಳ್ಳಲು ಇದು ಉತ್ತಮವಾದ ಸಮಯವಾಗಿದೆ. ನಿರಂತರವಾದ ಪ್ರಯತ್ನ ಮತ್ತು ಪರಿಶ್ರಮದಿಂದ ಮುನ್ನಡೆದರೆ ಸಾಧನೆ ಸುಲಭ. ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಎಲ್ಮೇಟ್ ಹಾಗೂ ಕಾರು ಚಾಲನೆ ಮಾಡುವಾಗ ಸೀಟ್‌ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು. ಎಲ್ಮೇಟ್ ಧರಿಸದೇ ಸಾಕಷ್ಟು ಯುವಕರು ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿದ್ದಾರೆ. ಆಗಾಗಿ ಯುವಜನಾಂಗ ಸಂಚಾರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಯುವಜನಾಂಗದ ಪಾತ್ರ ಅಪಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಪಿ.ಮಾದೇಶ್, ಪಿಎಂಇಬಿ ನಿರ್ದೇಶಕ ವಿ.ಜಿ.ಸಿದ್ದರಾಜು, ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ ಹನೂರು ಉಪಸ್ಥಿತರಿದ್ದರು.
ಬಹುಮಾನ ವಿತರಣೆ:
ಚಾಮರಾಜನಗರ ವಿಶ್ವವಿದ್ಯಾಲಯ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವಿತರಣೆ ಮಾಡಲಾಯಿತು. ಮೆಹಂದಿ, ರಂಗೋಲಿ, ಭಾವಗೀತೆ, ಜಾನಪದಗೀತೆ, ಚಿತ್ರಗೀತೆ, ್ಯಾಶನ್ ಶೋ ಹಾಗೂ ಇನ್ನಿತರೆ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕಬ್ಬಡ್ಡಿ, ವಾಲಿಬಾಲ್, ಥ್ರೋಬಾಲ್ ಹಾಗೂ ಇನ್ನಿತರೆ ಕ್ರೇಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಸಂರ್ಭದಲ್ಲಿ ವಿದ್ಯಾರ್ಥಿಗಳು ಕೇಕೆ ಹಾಕಿ ಸಂಭ್ರಮಿಸಿದರು.
ಚಾಮರಾಜನಗರ ವಿಶ್ವವಿದ್ಯಾಲಯ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಹಲವು ವಿಶ್ವವಿದ್ಯಾಲಯಗಳಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
-ಪ್ರೊ.ಎಂ.ಆರ್.ಗಂಗಾಧರ್, ಕುಲಪತಿ, ವಿಶ್ವ ವಿದ್ಯಾಲಯ, ಚಾಮರಾಜನಗರ.