ಚಾಮರಾಜನಗರ: ಶ್ರೀಕೃಷ್ಣನ ಭವ್ಯ ಮೆರವಣಿಗೆ, ಕೃಷ್ಣ ರಾಧೆಯರಾದ ಪುಟ್ಟ ಮಕ್ಕಳು, ಮಳೆಯ ನಡುವೆಯೂ ಮೊಸರು ಕುಡಿಕೆ ಹೊಡೆದು ಮೆರುಗು ನೀಡಿದ ಯುವಕರು. ಭಕ್ತಿ, ಭಾವ ತುಂಬಿದ ಚಿನ್ನಾಟದೊಂದಿಗೆ ಶ್ರೀಕೃಷ್ಣ ಜಯಂತಿ ವಿಜೃಂಭಣೆಯಿಂದ ನೆರವೇರಿತು.
ನಗರದ ರಥದ ಬೀದಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೀಮವಾರ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಇಸ್ಕಾನ್ ಟೆಂಪಲ್ ವತಿಯಿಂದ ರಥದ ಬೀದಿಯಲ್ಲಿ ಶ್ರೀ ಕೃಷ್ಣನ ಪ್ರತಿಮೆ ಮೆರವಣಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು. ಶ್ರೀ ಕೃಷ್ಣನ ಭಕ್ತರು, ಯುವಕ, ಯುವತಿಯರು ಮೆರವಣಿಗೆ ಉದ್ದಕ್ಕೂ ಕುಣಿದು ಕುಪ್ಪಳಿಸಿದರು. ಡೊಳ್ಳು ಕುಣಿತ, ಗೊರವರ ಕುಣಿತ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದರು.
ಬಳಿಕ ಪ್ರಾರಂಭವಾದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಸುಮಾರು 13 ವರ್ಷಗಳಿಂದ ನಗರದಲ್ಲಿ ಶ್ರೀಕೃಷ್ಣನ ಸಂದೇಶ ಸಾರುವ ಕೆಲಸ ಮಾಡಲಾಗುತ್ತಿದೆ. ಕೃಷ್ಣನನ್ನು ಪೂಜೆ ಮಾಡುವುದು, ನಿಜವಾಗಿಯೂ ಭಗವಂತನ ಸ್ಮರಣೆ ಮಾಡಿದಂತಾಗುತ್ತದೆ. ನಾನು, ನನ್ನದು ಎನ್ನುವುದು ಇಲ್ಲದಿರುವುದೇ ಕೃಷ್ಣನ ಅವತಾರ. ಭಾರತೀಯ ಪರಂಪರೆಯಲ್ಲಿ ರಾಮ ಮತ್ತು ಕೃಷ್ಣ ವಿಶೇಷ ಕೊಡುಗೆ ಕೊಟ್ಟಿದ್ದಾರೆ. ಸನಾತನ ಧರ್ಮವನ್ನು ಕೃಷ್ಣ ಕೊಟ್ಟಿದ್ದಾನೆ. ಕೃಷ್ಣ ಅಂದರೆ ಶಕ್ತಿ, ಸಾಹಸ, ಮಾನಸಿಕ ತಜ್ಞ, ಧರ್ಮ ರಕ್ಷಕ, ಸನಾತನ ರಕ್ಷಕ ಎಲ್ಲವೂ ಆಗಿದ್ದಾನೆ ಎಂದು ತಿಳಿಸಿದರು.
ಕೃಷ್ಣನ ಜನ್ಮ ಮತ್ತು ಕರ್ಮ ದಿವ್ಯವಾದುದು. ಭೌತಿಕ ಜಗತ್ತಿನಲ್ಲಿ ನಾವು ಜನ್ಮ ಪಡೆದುಕೊಳ್ಳುತ್ತೇವೆ. ಆದರೆ ಭಗವಂತ ಅವತಾರ ಎತ್ತುತ್ತಾನೆ. ಭಗವಂತನ ಜನ್ಮ ದಿವ್ಯವಾದುದು. ಕೃಷ್ಣ ಭಗವಂತನ ಅವತಾರ ಆಗಿದ್ದಾನೆ. ತಾಯಿ ಯಶೋಧೆ ಕೃಷ್ಣನಿಗಾಗಿ ಬೆಣ್ಣೆ ತಯಾರಿಸುತ್ತಿದ್ದರು. ಕೃಷ್ಣ ಬೇರೆಯವರ ಮನೆಗೆ ಹೋಗಿ ಬೆಣ್ಣೆ ಕದಿಯುತ್ತಿದ್ದ. ಗೋಪಿಕಾ ಸ್ತ್ರಿಯರು ಬೆಣ್ಣೆ ಕದಿಯಲಿ ಅಂತ ಪ್ರಾರ್ಥನೆ ಮಾಡುತ್ತಿದ್ದರು. ಆದರೆ ಕೃಷ್ಣನಿಗೆ ಬೆಣ್ಣೆ ಗಿಂತ ಭಕ್ತರ ಪ್ರೀತಿ ಇಷ್ಟ ಆಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಇಸ್ಕಾನ್ ಟೆಂಪಲ್ನ ಪಂಚಕಶಾಸ್ತ್ರಿ, ಖಾದಿ ಗ್ರಾಮೋದ್ಯೋಗ ಉಪನಿರ್ದೇಶಕ ರಾಜೇಂದ್ರ ಪ್ರಸಾದ್, ಪ್ರಣವಾನಂದ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಗುರುಲಿಂಗಯ್ಯ, ಸುರೇಶ್, ಪ್ರದೀಪ್‌ಕುಮಾರ್ ದೀಕ್ಷಿತ್, ಬಾಲಸುಬ್ರಮ್ಮಣ್ಯಂ ಹಾಗೂ ಇತರರು ಭಾಗವಹಿಸಿದ್ದರು.
ಗಮನಸೆಳೆದ ಕುಡಿಕೆ ಹೊಡೆಯುವ ಸ್ಪರ್ಧೆ:
ನಗರದ ರಥದ ಬೀದಿಯಲ್ಲಿ ಶ್ರೀಕೃಷ್ಣ ಜಯಂತಿ ಅಂಗವಾಗಿ ಆಯೋಜಿಸಿದ್ದ ಕುಡಿಕೆ ಹೊಡೆಯುವ ಸ್ಪರ್ಧೆ ಸಾರ್ವಜನಿಕರ ಗಮನ ಸೆಳೆಯಿತು. ಯುವಕರು ತಂಡಗಳನ್ನು ಮಾಡಿಕೊಂಡು ಪಿರಮಿಡ್ ಮಾದರಿಯಲ್ಲಿ ಒಬ್ಬರ ಮೇಲೊಬ್ಬರು ನಿಂತು ಮೊಸರು ಕುಡಿಕೆಯನ್ನು ಹೊಡೆದರು. ಈ ವೇಳೆ ಮತ್ತಷ್ಟು ಯುವಕರು ನೀರು ಎರಚಿ ಸಂಭ್ರಮಿಸಿದರು. ಮಳೆ ಬಂದರು ಯುವಕರು ಜಗ್ಗದೇ ಸಂಭ್ರಮದಲ್ಲಿ ಭಾಗಿಯಾಗಿದ್ದು ಮತ್ತಷ್ಟು ಜನರಿಗೆ ಉತ್ಸಾಹ ತುಂಬಿತು.
ಶ್ರೀಕೃಷ್ಣ, ರಾಧೆಯರಾದ ಮಕ್ಕಳು:
ನಗರದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಶ್ರೀ ಕೃಷ್ಣ ಹಾಗೂ ರಾಧೆಯರ ವೇಶಧಾರಿಯಾಗಿ ಗಮನಸೆಳೆದರು. ಮಕ್ಕಳು ಶ್ರೀಕೃಷ್ಣನ ವೇಶ ಧರಿಸಿ, ಕೈಯಲ್ಲಿ ಕೊಳಲು ಹಿಡಿದು ಆಟವಾಡುತ್ತಿದ್ದರು. ರಾಧೆಯ ವೇಶಧಾರಿಗಳು ಪುಟ್ಟ ಕೃಷ್ಣರಿಗೆ ಕೀಟಲೆ ಮಾಡುತ್ತದ್ದದ್ದು, ಎಲ್ಲರ ಮುಖದಲ್ಲೂ ಸಂತಸ ಮೂಡಿಸಿತು. ಕಾರ್ಯಕ್ರಮದ ಬಳಿಕ ಶ್ರೀ ಕೃಷ್ಣ ಗೀತಗಾಯನ ಕಾರ್ಯಕ್ರಮ ಮತ್ತಷ್ಟು ಸಾರ್ವಜನಿಕನ್ನು ಸೆಳೆಯಿತು.