ಚಾಮರಾಜನಗರ: ಶ್ರೀ ವಿದ್ಯಾಗಣಪತಿ ಮಂಡಳಿಯಿಂದ ಪ್ರತಿಷ್ಠಾಪಿಸುವ ದೊಡ್ಡ ಗಣಪತಿಯನ್ನು ಈ ಬಾರಿ 28 ದಿನಗಳ ಬಳಿಕ ವಿಸರ್ಜನೆ ಮಾಡಲಾಗುತ್ತದೆ ಎಂದು ಮಂಡಳಿಯ ಸದಸ್ಯರು ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಇಲಾಖೆ, ನಗರಸಭೆ ವತಿಯಿಂದ ಸೋಮವಾರ ಆಯೋಜಿಸಿದ್ದ ದೊಡ್ಡ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಕುರಿತ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಗರದಲ್ಲಿ ಶ್ರೀ ವಿದ್ಯಾಗಣಪತಿ ಮಂಡಳಿ ವತಿಯಿಂದ ಪ್ರತಿವರ್ಷವೂ ದೊಡ್ಡ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದೇವೆ. ಹಿಂದಿನ ವರ್ಷಗಳಲ್ಲಿ ಸುಮಾರು 58 ದಿನಗಳ ನಂತರ ವಿಸರ್ಜನೆ ಮಾಡುತ್ತಿದ್ದೇವು. ಆದರೆ ಈ ಬಾರಿ ಮಂಡಳಿಯ ಸದಸ್ಯರ ತೀರ್ಮಾನದಂತೆ 28 ದಿನಗಳು ಮಾತ್ರ ಪೂಜೆ ಸಲ್ಲಿಸಿ ನಂತರ ವಿಸರ್ಜನೆ ಮಾಡುತ್ತೇವೆ. ಗಣಪತಿ ವಿಸರ್ಜನೆಯ ಸಮಯದಲ್ಲಿ ನಗರದ ಎಲ್ಲಾ ಕೋಮಿನ ಜನರು ದೇವರಿಗೆ ಪೂಜೆ ಕೊಡುತ್ತಾರೆ. ಅದನ್ನು ಅಚ್ಚುಕಟ್ಟಾಗಿ ನೆರವೇರಿಸಬೇಕಿದೆ. ಇದರಿಂದ ಮೆರವಣಿಗೆ ನಿಧಾನವಾಯಿತು ಎನ್ನದೇ, ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸೂಕ್ತ ರೀತಿಯ ಸಹಕಾರ ನೀಡಬೇಕು ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ್ ಬಸವರಾಜ್ ಮಾತನಾಡಿ, ನಗರದಲ್ಲಿ ಬಹಳ ವಿಶಿಷ್ಟವಾಗಿ ದೊಡ್ಡ ಗಣಪತಿ ಕೂರಿಸುವುದು ನಡೆದುಕೊಂಡು ಬಂದಿದೆ. ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಪೂರ್ವಸಿದ್ಧತಾ ಸಭೆಯನ್ನು ಕರೆಯಲಾಗಿದೆ. ಜಿಲಾಧಿಕಾರಿ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಲಾಗುತ್ತದೆ. ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡದೆ, ಶಾಂತಿ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು. ಪ್ರತಿಷ್ಠಾಪನೆ ಹಾಗೂ ವಿಸರ್ಜನೆಯ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸೋಣ ಎಂದು ಹೇಳಿದರು.
ಸಭೆಯಲ್ಲಿ ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮಹೇಶ್, ಡಿವೈಎಸ್ಪಿ ಲಕ್ಷ್ಮಯ್ಯ, ನಗರಸಭೆ ಆಯುಕ್ತ ರಾಮದಾಸ್, ಆರೋಗ್ಯ ನಿರೀಕ್ಷಕಿ ಗಿರಿಜಾ, ಪಟ್ಟಣ ಪೊಲೀಸ್ ಠಾಣೆ ಇನ್‌ಸ್ೆಕ್ಟರ್ ರಾಜೇಶ್, ಸಂಚಾರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರವಿಕುಮಾರ್ ಹಾಗೂ ಶ್ರೀ ವಿದ್ಯಾ ಗಣಪತಿ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿದ್ದರು.