ಚಾಮರಾಜನಗರ : ಯಾವುದೇ ಅವಘಡ ಸಂಭವಿಸಿದಾಗ ಪ್ರಥಮ ಚಿಕಿತ್ಸೆ ಜೀವರಕ್ಷಕ ತಂತ್ರವಿದ್ದಂತೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕ ಕಲ್ಯಾಣ ಅಧಿಕಾರಿ ರಶ್ಮಿ ಅಭಿಪ್ರಾಯಪಟ್ಟರು.
ಪ್ರಾದೇಶಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರ, ನಿಪುಣ ಕೌಶಲ ಪ್ರಯೋಗಾಲಯ ವತಿಯಿಂದ ನಗರದ ಜಿಲ್ಲಾಸ್ಪತ್ರೆಯ ಶುಶ್ರೂಷಕರ ಶಾಲೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಾವುದೇ ತರಹದ ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆಯನ್ನು ಪ್ರಥಮ ಪ್ರತಿಸ್ಪಂದನೆ ಎನ್ನಬಹುದು. ತರಬೇತಿ ಪಡೆದವರು ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ಒದಗಿಸಿದರೆ ಅಪಘಾತದ ವ್ಯಕ್ತಿಯನ್ನು ರಕ್ಷಿಸಬಹುದು. ಪ್ರಥಮ ಚಿಕಿತ್ಸೆ ಎಂಬುದು ಕೆಲವು ಸಂದರ್ಭಗಳಲ್ಲಿ ಸರಳ ಚಿಕಿತ್ಸೆಗಳ ಸರಣಿಯಾಗಿದ್ದರೆ, ಇನ್ನೂ ಕೆಲವು ಸಂದರ್ಭಗಳಲ್ಲಿ ಮಹತ್ವದ ಜೀವರಕ್ಷಕ ತಂತ್ರವಾಗಿರುತ್ತದೆ. ತರಬೇತಿ ಪಡೆದ ವ್ಯಕ್ತಿ, ಲಭ್ಯವಿರುವ ಕೆಲವು ಉಪಕರಣಗಳ ಮೂಲಕ ಈ ಚಿಕಿತ್ಸೆಯನ್ನು ರೋಗಿ ಅಥವಾ ಗಾಯಾಳುವಿಗೆ ಒದಗಿಸಿ, ಅಮೂಲ್ಯ ಜೀವವನ್ನು ರಕ್ಷಿಸಬಹುದು ಎಂದು ಹೇಳಿದರು.
ಮೈಸೂರಿನ ತಜ್ಞ ವೈದ್ಯ ಮಂಜುನಾಥ್ ಮಾತನಾಡಿ, 3 ದಿನಗಳಿಂದ ಎನ್.ಜಿ.ಒ ಹಾಗೂ ಹಲವು ಸಂಘ ಸಂಸ್ಥೆಗಳಿಗೆ ಪ್ರಥಮ ಪ್ರತಿ ಸ್ಪಂದನೆ ನೀಡುವ ಬಗ್ಗೆ ತರಬೇತಿ ನೀಡಲಾಗಿದೆ. ಇದರ ಉದ್ದೇಶ ಮನುಷ್ಯನ ಜೀವ ಅಮೂಲ್ಯವಾದುದು. ಅದನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬರದು. ಪ್ರಥಮ ಪ್ರತಿಸ್ಪಂದನೆಯ ಮೂರು ಪ್ರಮುಖ ಉದ್ದೇಶಗಳು. ಅಂದರೆ ಜೀವವನ್ನು ಉಳಿಸುವುದು ಹಾಗೂ ಕಾಪಾಡುವುದು. ಅವಘಡಕ್ಕೆ ಕಾರಣವಾಗಿರುವ ಪರಿಸ್ಥಿತಿಯಿಂದ ಗಾಯಾಳನ್ನು ಸಂರಕ್ಷಿಸುವುದು ಅಥವಾ ದೂರವಿರಿಸುವುದು, ಆಗಿರುವ ಅವಘಡವು ತೀವ್ರವಾಗದಂತೆ ತಡೆಯುವ ಚಿಕಿತ್ಸೆ ನೀಡುವುದು ಎಂದು ತಿಳಿಸಿದರು.
ಶಿಬಿರಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತರಬೇತುದಾರರು ನೀಡಿದರು. ಕೆಎಸ್‌ಆರ್‌ಟಿಸಿ ಸಾಂಖ್ಯಿಕ ಅಧಿಕಾರಿ ವಾಣಿಶ್ರೀ, ಭರಣಿ ಸೇವಾಸಂಸ್ಥೆಯ ಪ್ರಾಂಶುಪಾಲೆ ಅರ್ಶಿಯಾ, ಮಂಡ್ಯ ತಜ್ಞ ವೈದ್ಯ ಡಾ.ಸುರೇಶ್, ಆರೋಗ್ಯ ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ತರಬೇತುದಾರ ಎನ್.ಆರ್.ಶಿವಶಂಕರ್. ಅರುಣ್, ಶರತ್ ಹಾಗೂ ಇತರರು ಭಾಗವಹಿಸಿದ್ದರು.