ಚಾಮರಾಜನಗರ: ಕೆಸರುಗದ್ದೆ ಓಟ ಮನಸ್ಸಿಗೆ ಆನಂದವನ್ನು ಉಂಟುಮಾಡುತ್ತದೆ ಎಂದು ಇನ್ನರ್ ವ್ಹೀಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಲಕ್ಷ್ಮಿ ಶಿವಕುಮಾರ ಹೇಳಿದರು.
ನಗರದ ಜಾಲಹಳ್ಳಿ ಹುಂಡಿ ಹಾಲು ಗೋವಿಂದರವರ ತೋಟದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.
ಕೆಸರು ಆಟದಿಂದ ಒತ್ತಡ ನಿವಾರಣೆಯಾಗಿ ಮಕ್ಕಳಲ್ಲಿ ಚೈತನ್ಯ ,ಸ್ಪೂರ್ತಿ, ಶಕ್ತಿ ಹಾಗೂ ಧೈರ್ಯವನ್ನು ಉಂಟುಮಾಡುತ್ತದೆ. ಕೆಸರುಗದ್ದೆ ಆಟ ಮತ್ತು ಸ್ಪರ್ಧೆ ಮನಸ್ಸಿಗೆ ಆನಂದವನ್ನು, ಸಂತೋಷವನ್ನು ಉಂಟುಮಾಡುತ್ತದೆ. ಶ್ರೀಕೃಷ್ಣ ಪ್ರತಿಷ್ಠಾನ ಮೊಸರು ಉತ್ಸವ ಹಮ್ಮಿಕೊಳ್ಳುವ ಮೂಲಕ ಚಾಮರಾಜನಗರದಲ್ಲಿ ಹೊಸ ಸಂಸ್ಕೃತಿ ಮತ್ತು ಪರಂಪರೆಯನ್ನು ಸೃಷ್ಟಿಸಿದೆ. ಆಧ್ಯಾತ್ಮಿಕತೆಯ ಮೂಲಕ ಯುವಕರಲ್ಲಿ ಜಾಗೃತಿ ಉಂಟು ಮಾಡುತ್ತಿರುವುದು ಅತ್ಯಂತ ಉತ್ತಮ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನು ತುಂಬಲು ಕೆಸರಗದ್ದೆ ಆಟ, ಕಬಡ್ಡಿ ಪಂದ್ಯಾವಳಿ ಸ್ಪರ್ಧೆಯ ಮೂಲಕ ಜಾಗೃತಿ ಉಂಟು ಮಾಡಲಾಗುತ್ತಿದೆ. ಕೆಸರಿನ ಆಟದಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ಮಣ್ಣಿನೊಂದಿಗಿನ ಸಂಪರ್ಕ ನವಶಕ್ತಿಯನ್ನು ಉಂಟುಮಾಡುತ್ತದೆ. ಮಣ್ಣು ಮತ್ತು ಪ್ರಕೃತಿ ಸೌಂದರ್ಯದ ತೋಟದಲ್ಲ್ಲಿ ಕೆಸರುಗದ್ದೆ ನಡೆಯುತ್ತಿರುವುದು ಬಹಳ ಸಂತೋಷವನ್ನು ತಂದಿದೆ ಎಂದರು.
ಕೆಸರುಗದ್ದೆ ಓಟ ಸ್ಪರ್ಧೆಯಲ್ಲಿ ಯೋಗೇಶ್, ಯಶ್ವಂತ್, ರೋಹಿತ್, ನಾಗೇಂದ್ರ, ಮಹಿಳೆಯರ ವಿಭಾಗದಲ್ಲಿ ಧನಲಕ್ಷ್ಮಿ, ಚೈತ್ರ, ವಿಜೇತರಾದರು. ತೆಂಗಿನಕಾಯಿಯನ್ನು ಕೆಸರಿನಲ್ಲಿ ಹುಡುಕುವ ಸ್ಪರ್ಧೆಯಲ್ಲಿ ಪೂಜಾ, ಪ್ರೀತಿ, ಭೂಮಿಕ, ಸಿಂಚನ, ಶಿವು, ಯಶ್, ವಿಷ್ಣು ವಿಜೇತರಾದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಗಾಯತ್ರಿ ಚಂದ್ರಶೇಖರ್, ಮಮತಾ ಬಾಲಸುಬ್ರಮಣ್ಯಂ, ಪ್ರದೀಪ್ ಕುಮಾರ್ ದೀಕ್ಷಿತ್, ಬಸವರಾಜು ,ಹಾಲು ಗೋವಿಂದ ,ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಮಾಲಾ, ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷೆ ಶರಣ್ಯ, ಝಾನ್ಸಿ ಮಕ್ಕಳ ಪರಿಷತ್ತಿನ ಶ್ರಾವ್ಯ ,ಸಾನಿಕ, ಚಂದನ್, ಮಂಜುನಾಥ್, ರಾಮ್ ಪ್ರಸಾದ್, ಶ್ರೀನಿಧಿ, ಮಹಾದೇವ ಹಾಜರಿದ್ದರು.