ಜಿಲ್ಲೆ

ಲೋಕ್ ಅದಾಲತ್ ನಲ್ಲಿ 36 ವರ್ಷಗಳ ಕೇಸ್ ರಾಜಿ

ಎ.ಎಸ್.ಮಣಿಕಂಠ

ಚಾಮರಾಜನಗರ: ಸುಮಾರು 1987 ರಲ್ಲಿ ನಿವೇಶನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿದ್ದ ಕೇಸ್ ರಾಜಿ ಸಂಧಾನದ ಮೂಲಕ ಇತ್ಯರ್ಥವಾಯಿತು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಅಪರ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ನಗರದ ದೇವಾಂಗ ಬಡಾವಣೆಯ ನಿವಾಸಿ ರಾಮಜೆಟ್ಟಿ ಹಾಗೂ ಸತ್ಯಭಾಮ ಎಂಬುವವರು 26 ವರ್ಷಗಳ ಹಿಂದೆ ದಾವೆ ಹೂಡಿದ್ದರು.

ಈ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ರಾಮಜೆಟ್ಟಿ ಪರ ತೀರ್ಪು ಬಂದಿತ್ತು. ಆದರೆ ಸತ್ಯಭಾಮ ಹೈಕೋರ್ಟ್‌ನಲ್ಲಿ ಅಪೀಲು ಸಲ್ಲಿಸಿದ್ದರು. ಹೈಕೋರ್ಟ್‌ನಲ್ಲಿಯೂ ರಾಮಜೆಟ್ಟಿ ಪರವಾಗಿ ತೀರ್ಪು ಪ್ರಕಟವಾಗಿತ್ತು. ಕೆಲ ವರ್ಷಗಳ ಹಿಂದೆ ರಾಮಜೆಟ್ಟಿ ಹಾಗೂ ಸತ್ಯಭಾಮ ನಿಧನರಾಗಿದ್ದು, ಅವರ ಮಕ್ಕಳು ನ್ಯಾಯಾಧೀಶೆ ಚಂಪಕಾ ನೇತೃತ್ವದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್, ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಸ್ವಾಮಿ ಹಾಗೂ ವಕೀಲರು ಉಪಸ್ಥಿತರಿದ್ದರು.

ಹಲವು ಪ್ರಕರಣ ಇತ್ಯರ್ಥ:
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಲೋಕ್ ಅದಾಲತ್ ನಲ್ಲಿ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಬ್ಯಾಂಕ್ ವಸೂಲಾತಿ, ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಪ್ರಕರಣಗಳು, ರಿಯಲ್ ಎಸ್ಟೇಟ್, ಸಾಲ ವಸೂಲಾತಿ, ಚೆಕ್ ಅಮಾನ್ಯ, ವಿದ್ಯುತ್ ಮತ್ತು ನೀರಿನ ಶುಲ್ಕ , ಕಾರ್ಮಿಕ ವಿವಾದ, ಭೂಸ್ವಾಧೀನ, ವೇತನ ಭತ್ಯೆ ಹಾಗೂ ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳನ್ನು ಸಾರ್ವಜನಿಕರು ಇತ್ಯರ್ಥ ಪಡಿಸಿಕೊಂಡರು. ಸಾಕಷ್ಟು ರೈತರ ಸಾಲದ ಪ್ರಕರಣಗಳು ಇತ್ಯರ್ಥವಾಗದೇ ರೈತರು ವಾಪಸ್ಸಾದರು.