ಚಾಮರಾಜನಗರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರತಿಷ್ಠಿತ ಸಂಸ್ಥೆಗಳಿಂದ ಐ.ಎ.ಎಸ್, ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಂದ ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರಿನಲ್ಲಿ ನಿರ್ಮಿಸಿರುವ ಹಜ್ ಭವನದಲ್ಲಿ 10 ತಿಂಗಳ ವಸತಿ ಸಹಿತ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳು 21 ರಿಂದ 35ರ ವಯೋಮಿತಿಯಲ್ಲಿರಬೇಕು. ಅರ್ಜಿ ಸಲ್ಲಿಸುವ ಕಡೆಯ ದಿನಾಂಕದೊಳಗೆ ಅಂತಿಮ ಪದವಿಯ ಫಲಿತಾಂಶ ಪ್ರಕಟಗೊಂಡಿರಬೇಕು ಹಾಗೂ ಪದವಿ ಹೊಂದಿರಬೇಕು. ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ದ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದವರಾಗಿರಬೇಕು. ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
ಅಭ್ಯರ್ಥಿಗಳಿಗೆ ಕೆ.ಇ.ಎ ಇಲಾಖಾ ವತಿಯಿಂದ ಅರ್ಜಿಗಳನ್ನು ಆಹ್ವಾನಿಸಲಾಗುವುದು ಹಾಗೂ ಸದರಿ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅರ್ಜಿಯನ್ನು ಸೆಪ್ಟೆಂಬರ್ 16ರೊಳಗೆ ಸಲ್ಲಿಸಬೇಕು. ಇಲಾಖಾ ವತಿಯಿಂದ ಯಾವುದೇ ತರಬೇತಿ ಪಡೆಯದ ಹೊಸ ಅಭ್ಯರ್ಥಿಗಳಿಗೆ ಪೂರ್ಣ ಪ್ರಮಾಣದ ತರಬೇತಿ ನೀಡಲಾಗುವುದು.
ಈಗಾಗಲೇ ಇಲಾಖೆ, ಖಾಸಗಿ ಸಂಸ್ಥೆಗಳಿಂದ ತರಬೇತಿ ಪಡೆದಿದ್ದು ಸ್ವಯಂ ಅಧ್ಯಯನ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಪೂರ್ಣ ಪ್ರಮಾಣದ ತರಗತಿಗಳನ್ನು ಹೊರತುಪಡಿಸಿ ಉಚಿತ ವಸತಿಯೊಂದಿಗೆ ಪ್ರತಿಷ್ಠಿತ ತರಬೇತಿ ಸಂಸ್ಥೆಯಿಂದ ಮೆಂಟರ್‌ಶಿಪ್, ಪ್ರಿಲಿಮ್ಸ್ ಟೆಸ್ಟ್ ಸೀರಿಸ್, ಮೇಯ್ನ ಟೆಸ್ಟ್ ಸೀರಿಸ್, ಕ್ರ್ಯಾಶ್ ಕೋರ್ಸ್ ಫಾರ್ ಪ್ರಿಲಿಮ್ಸ್, ಬ್ರಿಡ್ಜ್ ಫಾರ್ ಮೇಯ್ನ್ಸ, ಆಪ್ಷನಲ್ ಟೆಸ್ಟ್ ಸೀರಿಸ್ ಒದಗಿಸಲಾಗುವುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.