ಜಿಲ್ಲೆ

ನಿರ್ಲಕ್ಷ್ಯಕ್ಕೆ ಒಳಗಾದ 1ನೇ ವಾರ್ಡ್

ಎ.ಎಸ್.ಮಣಿಕಂಠ

ಚಾಮರಾಜನಗರ: ಅರ್ಧಕ್ಕೆ ನಿಂತ ರಸ್ತೆ ಮತ್ತು ಒಳಚರಂಡಿ ಅಭಿವೃದ್ಧಿ ಕಾಮಗಾರಿ, ಶಿಥಿಲಾವಸ್ಥೆ ತಲುಪಿದ ಶಾಲೆ ಕಟ್ಟಡ, ಕುಡಿಯುವ ನೀರಿಗೆ ಪರದಾಟ, ಸ್ಮಶಾನ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಲಭ್ಯವಿಲ್ಲದ ಜಾಗ, ಹೆಸರಿಗೆ 1ನೇ ವಾರ್ಡ್ ಎಂದು ಕರೆಸಿಕೊಳ್ಳುವ ಸೋಮವಾರಪೇಟೆ ಬಡಾವಣೆಯ ಸಮಸ್ಯೆಗಳ ಸರಮಾಲೆ ಬೆಳೆಯುತ್ತಲೇ ಹೋಗುತ್ತದೆ.

ನಗರದ ನಗರಸಭೆ ವ್ಯಾಪ್ತಿಯ ಸೋಮವಾರಪೇಟೆ 1ನೇ ವಾರ್ಡ್‌ನಲ್ಲಿ ಎಸ್ಸಿ, ಲಿಂಗಾಯತ, ಎಳವ, ಕುಂಬಾರ, ಗಾಣಿಗ ಸೇರಿದಂತೆ ಸುಮಾರು 15 ಸಮುದಾಯಗಳ 2500 ಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ವಾಸವಾಗಿದ್ದಾರೆ. ಬಡಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಹಾಗೂ ಮಧ್ಯಮವರ್ಗದ ಜನರು ವಾಸವಾಗಿದ್ದು, ತಾವು ವಾಸಿಸುತ್ತಿರುವ ಜಾಗಕ್ಕೆ ಇ-ಸ್ವತ್ತು, ಖಾತೆ ಆಗಿಲ್ಲ. ನಗರಸಭೆ ಅಧಿಕಾರಿಗಳು ಕಂದಾಯ ಕಟ್ಟಿಸಿಕೊಳ್ಳುತ್ತಿಲ್ಲ. ಈ ವರೆಗೂ ಸೂಕ್ತ ರೀತಿಯಲ್ಲಿ ರಸ್ತೆ, ಒಳಚರಂಡಿ ನಿರ್ಮಾಣವಾಗಿಲ್ಲ. ಕುಡಿಯುವ ನೀರು ಪೂರೈಕೆಗೆ ಟ್ಯಾಂಕ್, ಸಾರ್ವಜನಿಕ ಶೌಚಾಲಯ ಹಾಗೂ ಸಮುದಾಯ ಭವನಗಳು ನಿರ್ಮಾಣವಾಗಿಲ್ಲ.

ವಾರ್ಡ್‌ನಲ್ಲಿರುವ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೊಂಡಿದ್ದು, ಮಕ್ಕಳು ಆತಂಕದಲ್ಲೇ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ. ವಾರ್ಡ್ ವ್ಯಾಪ್ತಿಯಲ್ಲಿರುವ 4 ಅಂಗನವಾಡಿ ಕೇಂದ್ರಗಳು ಬೇಕಾಬಿಟ್ಟಿಯಾಗಿ ನಡೆಯುತ್ತಿದ್ದು, ಒಂದು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ನೇಮಕವಾಗಿಲ್ಲ. ವಾರ್ಡ್‌ನಲ್ಲಿ ಇರುವ ಏಕೈಕ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ವರ್ಷವಾದರೂ ಯಾವ ಅಧಿಕಾರಿಯೂ ಇತ್ತಕಡೆ ಗಮನಹರಿಸಿಲ್ಲ.

ಸದ್ಯಕ್ಕೆ ಸೋಮವಾರಪೇಟೆ ವ್ಯಾಪ್ತಿಗೆ ನಗರಾಭಿವೃದ್ಧಿ ಅನುದಾನದಲ್ಲಿ 2.20 ಕೋಟಿ ರೂ. ಅನುದಾನ ಹಾಗೂ ಸ್ಲಂಬೋರ್ಡ್‌ನಿಂದ 1.50 ಕೋಟಿ ರೂ. ಅನುದಾನವನ್ನು ನೀಡಿಲಾಗಿದೆ. ಈ ಅನುದಾನದಲ್ಲಿ ರಸ್ತೆ, ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಎಲ್ಲವೂ ಅರ್ಧಕ್ಕೆ ನಿಂತಿದೆ. ಬಡಾವಣೆಯಲ್ಲಿರುವ ನಿರ್ಗತಿಕರಿಗೆ ಹಾಗೂ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ 7 ವರ್ಷಗಳಿಂದಲೂ ಸೂಕ್ತ ಜಾಗ ನೀಡುವಂತೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಗರಸಭೆ ಮಾಜಿ ಸದಸ್ಯ ಎಸ್.ಮಹದೇವ್ ವಿಜಯವಾಣಿಗೆ ಮಾಹಿತಿ ನೀಡಿದರು.

ಕಲ್ಲಿನ ರಸ್ತೆಯಲ್ಲೇ ಓಡಾಟ:
ಸೋಮವಾರಪೇಟೆ ಬಡಾವಣೆಯ ಪ್ರಮುಖ ರಸ್ತೆಗಳ ನಿರ್ಮಾಣಕ್ಕಾಗಿ ಮಣ್ಣು, ಕಲ್ಲು ಸುರಿದು ಸುಮಾರು 6 ತಿಂಗಳು ಕಳೆದಿದ್ದು, ಈ ವರೆಗೂ ರಸ್ತೆ ನಿರ್ಮಾಣವಾಗದೇ ಜನರು ಕಲ್ಲಿನ ರಸ್ತೆಯಲ್ಲೇ ಓಡಾಡುವಂತಾಗಿದೆ. ಸಾಕಷ್ಟು ಜನರು ಈ ಕಲ್ಲಿನ ರಸ್ತೆಯಲ್ಲಿ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿದೆ. ವಾಹನ ಸವಾರರು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ. ಬಡಾವಣೆಯ ಅಲ್ಲಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಸಂಪೂರ್ಣವಾಗಿಲ್ಲ. ಚರಂಡಿ ಹೂಳು ತೆಗೆಸದೇ ಅಲ್ಲಲ್ಲಿ ಜೀತಿ ಉಂಟಾಗಿದೆ. ಒಳಚರಂಡಿ ಹಾಗೂ ಕುಡಿಯುವ ನೀರು ಕಾಮಗಾರಿಗೆ ಪೈಪ್ ಅಳವಡಿಸಿದ್ದು, ಈ ವರೆಗೂ ಸಂಪರ್ಕ ಕಲ್ಪಿಸಿಲ್ಲ. ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇಲ್ಲದೇ ಜನರು ನಿತ್ಯವೂ ಪರದಾಡುವಂತಾಗಿದೆ.

ಸೋರುತಿದೆ ಶಾಲೆ:
ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 100 ಕ್ಕಿಂತಲೂ ಹೆಚ್ಚು ಮಕ್ಕಳು ವಿದ್ಯಭ್ಯಾಸ ಮಾಡುತ್ತಿದ್ದು, ಹೆಂಚಿನ ಕಟ್ಟಡಗಳು ಮಳೆ ಬಂದರೆ ಸೋರುವಂತಹ ಪರಿಸ್ಥಿತಿ ಇದೆ. ಸಾಕಷ್ಟು ಹೆಂಚುಗಳು ಹೊಡೆದು ಹೋಗಿದ್ದು, ಈವರೆಗೂ ಸರಿಪಡಿಸಿಲ್ಲ. ಶಾಲೆಯಲ್ಲಿ ಮಕ್ಕಳು ಕೂರಲು ಸೂಕ್ತ ರೀತಿಯ ಬೆಂಚುಗಳ ವ್ಯವಸ್ಥೆ ಇಲ್ಲ. ಶಾಲೆಯ ಹೊರಗಡೆ ಬಿಸಿಲಲ್ಲಿ ಕುಳಿತು ಬಿಸಿಯೂಟ ಸೇವಿಸುವಂತಹ ಪರಿಸ್ಥಿತಿ ಇದೆ. ಶಾಲೆಗೆ ಅಗತ್ಯವಾದ ಮೂಲಸೌಕರ್ಯ, ಆಟದ ಮೈದಾನ ಹಾಗೂ ಇನ್ನಿತರೆ ಸಮಸ್ಯೆಗಳು ಇದ್ದು ನಗರಸಭೆ ಇತ್ತ ಕಡೆ ಗಮನಹರಿಸಿಲ್ಲ ಎಂದು ವಾರ್ಡ್ ನಿವಾಸಿಗಳು ದೂರುತ್ತಾರೆ.

ಕೆಟ್ಟುನಿಂತ ಶುದ್ಧ ನೀರಿನ ಘಟಕ:
ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದಲ್ಲೇ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ವರ್ಷಗಳೇ ಕಳೆದಿದ್ದರೂ ಇಂದಿಗೂ ರಿಪೇರಿ ಮಾಡಿಸಿಲ್ಲ. ಕುಡಿಯುವ ನೀರಿಗೆ ಬಡಾವಣೆಯಲ್ಲಿ ಸಾಕಷ್ಟು ಸಮಸ್ಯೆ ಇದ್ದು, ನಗರಸಭೆ ವತಿಯಿಂದ ಈವರೆಗೂ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಮನೆಮನೆಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಲಾಗಿದ್ದು, ಇಂದಿಗೂ ಅದರಲ್ಲಿ ನೀರು ಬಂದಿಲ್ಲ. ಸಂಪರ್ಕ ಕಲ್ಪಿಸಲು ಮಾಡಿದ್ದ ಹಳ್ಳಗಳನ್ನು ಇಂದಿಗೂ ಮುಚ್ಚಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದರು.

ಹೆಸರಿಗಷ್ಟೇ ಮೊದಲನೇ ವಾರ್ಡ್ ಆಗಿದ್ದು, ಅಭಿವೃದ್ಧಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ರಸ್ತೆ, ಚರಂಡಿ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಸಾಕಷ್ಟಿದ್ದು, ಅಂಗನವಾಡಿ ಮತ್ತು ಶಾಲೆಯ ಅಭಿವೃದ್ಧಿ ಆಗಬೇಕಾಗಿದೆ.-ರಾಚಯ್ಯ, ನಿವಾಸಿ, 1ನೇವಾರ್ಡ್, ಚಾಮರಾಜನಗರ. ನಗರೋತ್ಥಾನಯೋಜನೆ ಹಾಗೂ ಸ್ಲಂಬೋರ್ಡ್ ವತಿಯಿಂದ ವಾರ್ಡ್ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದೇನೆ. ಚುನಾವಣೆ ಬಂದ ಕಾರಣದಿಂದ ಕಾಮಗಾರಿ ಸ್ಥಗಿತವಾಗಿದೆ. ಕೂಡಲೇ ರಸ್ತೆ, ಚರಂಡಿ ಕಾಮಗಾರಿ ಪ್ರಾರಂಭಿಸಲು ಕ್ರಮವಹಿಸುತ್ತೇನೆ.-ನೀಲಮ್ಮ, ಸದಸ್ಯ, 1ನೇವಾರ್ಡ್, ಸೋಮವಾರಪೇಟೆ, ಚಾಮರಾಜನಗರ. ನಗರೋತ್ಥಾನ ಯೋಜನೆಯಡಿ 1 ನೇ ವಾರ್ಡ್‌ನಲ್ಲೇ ಮೊದಲು ಕಾಮಗಾರಿ ಪ್ರಾರಂಭಿಸಿದ್ದು, ಚುನಾವಣೆ ಎದುರಾದ ಕಾರಣಕ್ಕೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಚಿಂತನೆ ನಡೆದಿದೆ. ವಾರ್ಡ್‌ಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತೇನೆ.-ರಾಮದಾಸ್, ಆಯುಕ್ತರು, ನಗರಸಭೆ, ಚಾಮರಾಜನಗರ.