ಜಿಲ್ಲೆ

ರೈತರೊಂದಿಗೆ ಜಿಲ್ಲಾಧಿಕಾರಿ ಸಭೆ

ಎ.ಎಸ್.ಮಣಿಕಂಠ

ಚಾಮರಾಜನಗರ: ತಾಲೂಕಿನ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಗಿರಿವಿಗೆ ಇಟ್ಟ ಚಿನ್ನ ಬಿಡಿಸಿಕೊಡುವ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ರೈತ ಮುಖಂಡರೊಂದಿಗೆ ಬುಧವಾರ ಸಭೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ರೈತರು ಗಿರವಿಗೆ ಇಡಲಾಗಿರುವ ಚಿನ್ನ ಬಿಡಿಸಿಕೊಡುವ ಕುರಿತು ವಿವರವಾಗಿ ಚರ್ಚಿಸಲಾಯಿತು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್, ನಾಗರಾಜು, ಹರ್ಷ, ಅರಳೀಕಟ್ಟೆ ಕುಮಾರ್, ಬಸವರಾಜಪ್ಪ, ನಂದಿಶ್ ಮತ್ತಿತ್ತರರು ಸಮಸ್ಯೆಗಳನ್ನು ವಿವರವಾಗಿ ಸಭೆಯಲ್ಲಿ ಮುಂದಿಟ್ಟರು. ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಮಾತನಾಡಿ, ಈಗಾಗಲೇ ಚಿನ್ನ ಗಿರವಿ ಪ್ರಕರಣ ಸಂಬಂಧ ತನಿಖೆ ನಡೆದಿದ್ದು, ಒಡವೆ ಗಿರವಿ ಇಟ್ಟ ಮಾಲಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಪೊಲೀಸ್ ಹಾಗೂ ಇತರೆ ಅಧಿಕಾರಿಗಳು ಪ್ರಕರಣದ ಬಗ್ಗೆ ಗಂಭೀರವಾಗಿ ಕ್ರಮ ವಹಿಸಿದ್ದಾರೆ ಎಂದರು.

ಪ್ರಕರಣ ಸಂಬಂಧ ನೇಮಕವಾಗಿರುವ ಅಧಿಕಾರಿಗಳು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಪರಿಶೀಲಿಸುತ್ತಿದ್ದೇವೆ. ಸಮಸ್ಯೆ ಪರಿಹಾರ ಕುರಿತ ಅಗತ್ಯ ಕ್ರಮಗಳಿಗೆ ಮುಂದಾಗಿದ್ದೇವೆ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮಾತನಾಡಿ, ಗಿರವಿ ಪ್ರಕರಣದ ತನಿಖೆಯನ್ನು ಇಲಾಖೆಯ ಅಧಿಕಾರಿಗಳು ಆರಂಭಿಸಿದ್ದಾರೆ. ಸುಸೂತ್ರವಾಗಿ ಸಮಸ್ಯೆ ಬಗೆಹರಿಸಲು ಇಲಾಖಾ ವತಿಯಿಂದ ಎಲ್ಲಾ ನಿರ್ದೇಶನ ನೀಡಿದ್ದು ಕ್ರಮ ವಹಿಸಲಾಗಿದೆ. ರೈತರು ಗಿರವಿ ಸಂಬಂಧ ಯಾವುದೇ ಮಾಹಿತಿಗಳಿದ್ದರೂ ನೀಡಬೇಕು ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಮತ್ತು ರೈತ ಮುಖಂಡರು ಇತರರು ಉಪಸ್ಥಿತರಿದ್ದರು.