ಜಿಲ್ಲೆ

ಅಜಾದ್ ಹಿಂದು ಸೇನಾ ಕಾರ್ಯಕರ್ತರಿಂದ ಪ್ರತಿಭಟನೆ

ಚಾಮರಾಜನಗರ : ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿರುವ ಚಿತ್ರ ನಟ ಪ್ರಕಾಶ್‌ರೈ ಮತ್ತು ಸಚಿವ ಎಚ್.ಸಿ.ಮಹದೇವಪ್ಪ ವಿರುದ್ಧ ಅಜಾದ್ ಹಿಂದು ಸೇನಾ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಬಳಿಕ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಸಾಗಿ ಉದಯನಿಧಿ ಸ್ಟಾಲಿನ್, ಪ್ರಕಾಶ್‌ರೈ ಹಾಗೂ ಎಚ್.ಸಿ.ಮಹದೇವಪ್ಪ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಜಾದ್ ಹಿಂದುಸೇನೆ ಅಧ್ಯಕ್ಷ ಎಂ.ಎಸ್.ಪೃಥ್ವಿರಾಜ್ ಮಾತನಾಡಿ, ಸನಾತನ ಧರ್ಮವು ಡೆಂೆ, ಮಲೇರಿಯಾ ಇದ್ದಂತೆ ಅದನ್ನು ನಿರ್ಮೂಲನೆ ಮಾಡಬೇಕು ಎಂಬ ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಬಹುಸಂಖ್ಯಾತ ಹಿಂದುಗಳಿಗೆ ಅಪಮಾನವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಮಗನಾಗಿ, ಜವಾಬ್ದಾರಿಯುತ ಸಚಿವ ಸ್ಥಾನದಲ್ಲೇ ಇರುವ ಉದಯನಿಧಿ ನೀಡಿರುವ ಹೇಳಿಕೆ ಖಂಡನೀಯ. ಆತನನ್ನು ಸಚಿವ ಸ್ಥಾನದಿಂದ ಕಿತ್ತೆಸೆದು, ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಸನಾತನ ಧರ್ಮ ಹಾಗೂ ಹಿಂದುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಉದಯನಿಧಿ ಅವರನ್ನು ಬೆಂಬಲಿಸಿರುವ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುವ ಮೂಲಕ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಈ ಕೂಡಲೇ ಸಚಿವರು ರಾಜೀನಾಮೆ ನೀಡಬೇಕು. ಚಿತ್ರನಟ ಪ್ರಕಾಶ್‌ರೈ ಹಿಂದು ಧರ್ಮವನ್ನು ಪದೇಪದೆ ಅವಹೇಳನ ಮಾಡುತ್ತಾ ಬರುತ್ತಿದ್ದಾರೆ. ಸನಾತನ ಧರ್ಮ ಹಾಗೂ ಹಿಂದುಗಳ ಬಗ್ಗೆ ಹಗುರವಾಗಿ ಮಾತನಾಡುವ ಇಂತಹವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಂ.ಎಸ್.ಚಂದ್ರಶೇಖರ್, ಕೃಷ್ಣ, ಶ್ರೀನಿವಾಸ್, ಮಹೇಶ್, ಮೂರ್ತಿ, ನಾಗರಾಜು, ಪ್ರಭು, ಆನಂದ್, ಗುರು, ರಾಜೇಂದ್ರ, ಮಣಿಕಂಠ ಇತರರು ಭಾಗವಹಿಸಿದ್ದರು.