ಚಾಮರಾಜನಗರ: ಬದುಕಿನ ವ್ಯವಹಾರದಲ್ಲಿ ಹಾಗೂ ಕಾನೂನು ಚೌಕಟ್ಟಿನ ವಿಚಾರಕ್ಕೆ ಬಂದಾಗ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ್ ಸಲಹೆ ನೀಡಿದರು.
ನಗರದ ಸೇವಾ ಭಾರತಿ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾಡಳಿತ, ಮಕ್ಕಳ ನಿರ್ದೇಶನಾಲಯ,ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳು, ಬಾಲ್ಯವಿವಾಹ, ಪೋಕ್ಸೋ ಕಾಯ್ದೆ, ಸೈಬರ್ ಅಪರಾಧ, ಮೊಬೈಲ್ ವ್ಯಸನದ ಕುರಿತ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇದ್ದರೆ ಅದರ ಆಳ-ಅಗಲ ಅರ್ಥವಾಗುತ್ತದೆ. ಬಾಲ್ಯವಿವಾಹಗಳು ಸಹಿತ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಕಾರಣಕ್ಕೆ 2021ರಲ್ಲಿ ಫೋಕ್ಸೋ ಕಾಯ್ದೆಯು ಜಾರಿಯಾಗಿದೆ. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ 24 ಗಂಟೆಯ ಒಳಗಾಗಿ ವೈದ್ಯಕೀಯ ತಪಾಸಣೆಯಾಗಬೇಕು. ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಬೇಕು. ಮಕ್ಕಳ ಸ್ನೇಹಿ ನ್ಯಾಯಾಲಯಗಳು ದೌರ್ಜನ್ಯ ಎಸಗುವವರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸುತ್ತಿದೆ ಎಂದು ತಿಳಿಸಿದರು.
ವಿದ್ಯಾಥಿಗಳು ಉತ್ತಮವಾಗಿ ಓದಬೇಕು, ಕಾನೂನಿನ ಕುರಿತು ಹೆಚ್ಚಿನ ಅರಿವು ಬೆಳೆಸಿಕೊಳ್ಳಬೇಕು. ಉತ್ತಮ ಸಹಕಾರ ಮೌಲ್ಯ ಗುಣಗಳನ್ನು ಬೆಳೆಸಬೇಕು. ಈ ಮೂಲಕ ಮಕ್ಕಳ ಹಕ್ಕುಗಳು ಹಾಗೂ ಮಹಿಳಾ ಹಕ್ಕುಗಳನ್ನು ಕಾಪಾಡಬೇಕು. ಮಾನವ ಕಳ್ಳ ಸಾಗಾಣಿಕೆ ದೊಡ್ಡ ಅಪರಾಧವಾಗಿದ್ದು, ಇದರಲ್ಲಿ ಮಕ್ಕಳು ಮಹಿಳೆಯರನ್ನು ಬಳಕೆ ಮಾಡುತ್ತಾರೆ. ಈ ಕುರಿತು ಮಕ್ಕಳು ಎಚ್ಚರಿಕೆಯಿಂದ ಇರಬೇಕು. ದೇಶದ ಕಾನೂನು ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಸಲಹೆ ನೀಡಿದರು.
ಬಾಲ ನ್ಯಾಯ ಮಂಡಳಿ ಸದಸ್ಯ ಹಾಗೂ ಸಂಪನ್ಮೂಲ ವ್ಯಕ್ತಿ ಟಿ.ಜೆ.ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಇಂದಿಗೂ ಹೆಚ್ಚಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಜಿಲ್ಲೆ 6 ನೇ ಸ್ಥಾನದಲ್ಲಿದೆ. ಹೆಣ್ಣು ಮಕ್ಕಳಿಗೆ 18 ವರ್ಷ ಮತ್ತು ಗಂಡು ಮಕ್ಕಳಿಗೆ 21 ವರ್ಷಗಳ ಮೊದಲೇ ವಿವಾಹ ಜರುಗಿದರೆ ಗಂಡನಿಗೆ 1 ವರ್ಷ ಜೈಲು, 1 ರಿಂದ 2 ಲಕ್ಷ ರೂಪಾಯಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಪುರೋಹಿತರು, ತಂದೆ-ತಾಯಿ, ಹಿರಿಯರು ಸಹಿತ ಇಂತಹ ಪ್ರಕರಣಗಳಲ್ಲಿ ಆರೋಪಿಗಳಾಗುತ್ತಾರೆ. ಬಾಲ್ಯ ವಿವಾಹ ಮಾಹಿತಿ ಕಂಡು ಬಂದರೆ ಮುಂಚಿತವಾಗಿ 112 ಅಥವಾ 1098 ಕರೆ ಮಾಡಿ ಮಾಹಿತಿ ನೀಡಿ ಎಂದು ತಿಳಿಸಿದರು.
ಪಟ್ಟಣ ಪೊಲೀಸ್ ಠಾಣೆ ಸಹಾಯಕ ಆರಕ್ಷಕ ನಿರೀಕ್ಷಕ ದೊರೆಸ್ವಾಮಿ, ಚಿಕಿತ್ಸಾಕ ಮನಶಾಸಜ್ಞೆ ರೂಪೇಶ್ವರಿ, ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ರಾಧಿಕಾ ಗುಪ್ತ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆಲುವರಾಜು, ಕಾರ್ಯಕ್ರಮ ಸಂಯೋಜಕ ಅಶೋಕ್, ಪುಟ್ಟರಾಜು, ಭಾರ್ಗವ, ರವಿ ಹಾಗೂ ಇತರರು ಭಾಗವಹಿಸಿದ್ದರು.