ಚಾಮರಾಜನಗರ: ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ವತಿಯಿಂದ ಮೇ.22 ರಂದು ಗ್ರಾಮಾಂತರ ಬಸವ ಜಯಂತಿ ಹಾಗೂ ಶ್ರೀಮಠದ ದಾಸೋಹ ಭವನ ಭೂಮಿಪೂಜೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಚನ್ನಬಸವಸ್ವಾಮಿ ಮಾಹಿತಿ ನೀಡಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಶ್ರೀ ಸಿದ್ದಮಲ್ಲೇಶ್ವರ ವಿರಕ್ತಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮ, ಶ್ರೀಮಠದ ಲಿಂಗೈಕ್ಯ ಶರಣರ ಸ್ಮರಣೋತ್ಸವ ಹಾಗೂ ದಾಸೋಹ ಭವನದ ಭೂಮಿಪೂಜೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶ್ರೀಕ್ಷೇತ್ರ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಚಾಲನೆ ನೀಡಿ, ದಾಸೋಹ ಭವನದ ಭೂಮಿಪೂಜೆ ನೆರವೇರಿಸುತ್ತಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ.21ರಂದು ರಾತ್ರಿ ಶ್ರೀ ಸಿದ್ದಮಲ್ಲೇಶ್ವರ ಕಲಾ ಬಳಗ ವತಿಯಿಂದ ಸುತ್ತೂರು ಗುರುಶಾಂತಪ್ಪ ವಿರಚಿತ ‘ಜಗಜ್ಯೋತಿ ಬಸವೇಶ್ವರರು’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಮೇ.22 ಬೆಳಗ್ಗೆ 5 ಗಂಟೆಗೆ ಪೂಜ್ಯರ ಗದ್ದುಗೆಗೆ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ನಡೆಯುತ್ತದೆ. ಬೆಳಗ್ಗೆ 6.30 ಗಂಟೆಗೆ ಮಲ್ಲನಮೂಲೆ ಮಠದ ಶ್ರೀ ಚನ್ನಬಸವ ಮಹಾಸ್ವಾಮಿ ಅವರಿಂದ ಧ್ವಜಾರೋಹಣ ಹಾಗೂ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿ ಇಷ್ಟಲಿಂಗಪೂಜೆ ನೆರವೇರಿಸಲಾಗುತ್ತದೆ. ಕಾರ್ಯಕ್ರಮದಲ್ಲಿ 40ಕ್ಕಿಂತಲೂ ಹೆಚ್ಚು ವಿವಿಧ ಮಠದ ಪೀಠಾಧ್ಯಕ್ಷರು, ರಾಜಕಾರಣಿಗಳು, ಹಲವು ಸಂಘ ಸಂಸ್ಥೆಗಳ ಮುಖಂಡರು, ಶ್ರೀಮಠದ ವಿಧ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.
ಸುಮಾರು 30 ಸಾವಿರಕ್ಕಿಂತಲೂ ಅಧಿಕ ಭಕ್ತರು ಭಾಗವಹಿಸುವ ಸಾಧ್ಯತೆ ಇದ್ದು, ನಿರಂತರ ಮಹಾಪ್ರಸಾದ ವಿನಿಯೋಗ ನಡೆಯುತ್ತದೆ. ಗ್ರಾಮಾಂತರ ಬಸವ ಜಯಂತಿಯಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ನಡೆಸಲಾಗುತ್ತಿದೆ ಎಂದರು ಮಾಹಿತಿ ನೀಡಿದರು.