ಜಿಲ್ಲೆ

ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡಪರ ಹೋರಾಟಗಾರರು ಮಂಗಳವಾರ ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ತಮಿಳುನಾಡು ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸ್‌ಗೌಡ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ 15 ದಿನಗಳಿಂದಲೂ ರಾಜ್ಯಾದ್ಯಂತ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲಾ ಕೇಂದ್ರದಲ್ಲಿ ಕಳೆದ 6 ದಿನಗಳಿಂದಲೂ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ನೀರು ಬಿಟ್ಟಿರುವುದನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು. ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ, ಮಹೇಶ್‌ಗೌಡ, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್, ರವಿಚಂದ್ರ ಪ್ರಸಾದ್, ಚಾ.ಹ.ರಾಮು, ಸಿದ್ದರಾಜು, ಸಾಗರ್ ರಾವತ್ ಇತರರು ಭಾಗವಹಿಸಿದ್ದರು.

ಡಿಕೆಶಿ ಹೇಳಿಕೆಗೆ ಖಂಡನೆ: ಮೇಕೆದಾಟು ಹೋರಾಟ ಮಾಡುವಾಗ ಸಂಘಟನೆಗಳು ಎಲ್ಲಿದ್ದವು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಳುತ್ತಾರೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡಪರ ಹಾಗೂ ರೈತ ಸಂಘಟನೆಗಳು ಕಳೆದ 16 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿವೆ. ಕಾವೇರಿ, ಕಳಸ ಬಂಡೂರಿ, ಹೋಗೆನಕಲ್ ವಿಚಾರವಾಗಿಯೂ ನಿರಂತರ ಹೋರಾಟ ಮಾಡುತ್ತಾ ಬಂದಿದ್ದೇವೆ. ಇಂತಹ ಹೇಳಿಕೆ ಡಿಸಿಎಂಗೆ ಶೋಭೆ ತರುವುದಿಲ್ಲ ಎಂದು ಧರಣಿನಿರತರು ಆಕ್ರೋಶ ಹೊರಹಾಕಿದರು.