ಚಾಮರಾಜನಗರ: ತಾಲೂಕಿನ ಮಂಗಲ ಗ್ರಾಮದಲ್ಲಿ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಲವು ಕೊಠಡಿಗಳು ಶಿಥಿಲಗೊಂಡಿವೆ.
ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿಯಲ್ಲಿ ಸುಮಾರು 180 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸುಮಾರು 25 ವರ್ಷಗಳ ಹಿಂದೆ ಉದ್ಯೋಗ ಭರವಸೆ ಯೋಜನೆಯಲ್ಲಿ ನಿರ್ಮಾಣ ಮಾಡಿದ್ದ 2 ಶಾಲಾ ಕೊಠಡಿಗಳು ಹಾಗೂ ಶತಮಾನದ ಹಿಂದೆ ನಿರ್ಮಾಣ ಮಾಡಿದ್ದ 1 ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಗೋಡೆಯ ಮೇಲ್ಛಾವಣಿಯ ಸೀಮೆಂಟ್ ಕುಸಿದು ಬೀಳುತ್ತಿದ್ದು, ಕಟ್ಟಡದ ಕಿಟಕಿ, ಬಾಗಿಲು ಮುರಿದಿದ್ದು, ನೆಲವೆಲ್ಲವೂ ಕಿತ್ತುಬಂದಿದೆ. ಬಿರುಕು ಬಿಟ್ಟಿರುವ ಗೋಡೆಗಳು ಆತಂಕ ಸೃಷ್ಟಿಸಿದೆ. ಶಿಥಿಲಗೊಂಡಿರುವ ಕೊಠಡಿಯಲ್ಲಿ ಸದ್ಯಕ್ಕೆ ಮಕ್ಕಳನ್ನು ಕೂರಿಸದಿದ್ದರೂ ಸಹ, ಕೊಠಡಿ ಬಳಿ ಮಕ್ಕಳು ಓಡಾಡುತ್ತಲೇ ಇರುತ್ತಾರೆ. ಶೌಚಗೃಹ ಹಾಳಾಗಿದ್ದು, ಸುತ್ತಲೂ ಇರುವ ಕಾಂಪೌಂಡ್ ಕೂಡ ಕೆಲವು ಕಡೆ ಕುಸಿದಿದೆ ಮತ್ತು ಬಿರುಕು ಬಿಟ್ಟಿದೆ.
ಸಂಪೂರ್ಣ ಶಿಥಿಲಗೊಂಡಿರುವ 2 ಕೊಠಡಿಗಳನ್ನು ನೆಲಸಮ ಮಾಡಿ, ಹೊಸ ಕಟ್ಟಡ, ರಂಗಮಂದಿರ ನಿರ್ಮಾಣ ಮಾಡಬೇಕು. ಶೌಚಗೃಹ ರಿಪೇರಿ ಮಾಡಿಸಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದರೂ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಶಾಲಾಭಿವೃದ್ಧಿ ಹಣ ಕೊಡಿ:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಲೆಯ ಆಸ್ತಿಯನ್ನು ರಸ್ತೆ ನಿರ್ಮಾಣಕ್ಕೆ ಒತ್ತುವರಿ ಮಾಡಿಕೊಂಡು 11 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಮೇಲಧಿಕಾರಿಗಳು ಈ ಹಣವನ್ನು ವಾಪಸ್ ಪಡೆದುಕೊಂಡಿದ್ದಾರೆ. ಈ ಅನುದಾನವನ್ನು ಬಿಡುಗಡೆ ಮಾಡಿದರೆ ಶಾಲೆಯ ಅಭಿವೃದ್ಧಿ ಮಾಡಬಹುದು ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ತಿಳಿಸಿದ್ದಾರೆ.
ಸುಮಾರು 3 ಕೊಠಡಿಗಳು ಹಾಳಾಗಿದ್ದರೂ ಮಕ್ಕಳಿಗೆ ಕೊಠಡಿ ಸಮಸ್ಯೆ ಉಂಟಾಗಿಲ್ಲ. ಶಿಥಿಲಗೊಂಡಿರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸುತ್ತಿಲ್ಲ. ಇವುಗಳಲ್ಲಿ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಿದರೆ ಅನುಕೂಲವಾಗುತ್ತದೆ.-ರವಿಕುಮಾರ್, ಮುಖ್ಯ ಶಿಕ್ಷಕ, ಮಂಗಲ ಚಾಮರಾಜನಗರ.
ಶಾಲೆಯಲ್ಲಿ ಸುಮಾರು 3 ಕೊಠಡಿ ಸಂಪೂರ್ಣ ಶಿಥಿಗೊಂಡಿವೆ. ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣವಾಗಬೇಕಿದೆ. ಕಾಂಪೌಂಡ್ ನಿರ್ಮಾಣ ಮಾಡಬೇಕಿದೆ. ಶಾಲಾಭಿವೃದ್ಧಿ ಹಣವನ್ನು ಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ.-ಮಂಜುನಾಥ್, ಗ್ರಾಪಂ ಸದಸ್ಯ, ಮಂಗಲ, ಚಾಮರಾಜನಗರ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಂದ ಹಣವನ್ನು ಶಾಲೆಯಲ್ಲಿ ಬಳಕೆ ಮಾಡಲಿಲ್ಲ. ಆಗಾಗಿ ಸರ್ಕಾರದ ಮಟ್ಟದಲ್ಲಿ ಹಣವನ್ನು ವಾಪಸ್ ಪಡೆದುಕೊಂಡರು. ಈಗ ಕ್ರಿಯಾಯೋಜನೆ ಮಾಡಲು ಸೂಚನೆ ನೀಡಿದ್ದಾರೆ. ಮಂಗಲ ಶಾಲೆಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಮಾಡಿ ಕಳಿಸುತ್ತೇವೆ.-ಸೋಮಣ್ಣೆಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ, ಚಾಮರಾಜನಗರ.