ಚಾಮರಾಜನಗರ: ಮಹಿಳೆಯರು ಹಾಗೂ ವೃದ್ಧರು ಹೆಚ್ಚಾಗಿ ಕಣ್ಣಿನ ಪೊರೆ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ರೋಟರಿ ಅಧ್ಯಕ್ಷ ಸಿ.ಎನ್.ಚಂದ್ರಪ್ರಭಾ ಜೈನ್ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ತಮಿಳನಾಡಿನ ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದವರು ಸೂಕ್ತ ಚಿಕಿತ್ಸೆ ಪಡೆಯದೆ ಕಷ್ಟ ಪಡುತ್ತಿದ್ದಾರೆ. ಹಿಂದುಳಿದ ವರ್ಗದ ಮಹಿಳೆಯರು ಹಾಗೂ ವೃದ್ಧರಿಗೆ ರೋಟರಿ ಸಂಸ್ಥೆಯು ಪ್ರತಿ ತಿಂಗಳ ಮೊದಲನೆಯ ಭಾನುವಾರ ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿದೆ. ಅವಶ್ಯಕತೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಹಿಂದೆ ಆಯೋಜಿಸಿದ್ದ ಶಿಬಿರದಲ್ಲಿ ಕುಶಾಲನಗರದ ಅಂಗವಿಕಲ ಜಬಿ ಉಲ್ಲಾಖಾನ್ ಭಾಗವಹಿಸಿದ್ದರು. ಕಣ್ಣಿನ ತಪಾಸಣೆ ಮಾಡಿಸಿ ಪೊರೆ ತೆಗೆಯುವ ಶಸಚಿಕಿತ್ಸೆಗೂ ಒಳಪಟ್ಟಿದ್ದರು. ಈ ರೀತಿ ಹೊರ ಜಿಲ್ಲೆಯವರೂ ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಶಿಬಿರದಲ್ಲಿ 560 ಜನರ ತಪಾಸಣೆ ಮಾಡಲಾಯಿತು. 95 ಜನರನ್ನು ಕಣ್ಣಿನ ಪೊರೆ ಶಸಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಬುಧವಾರ ಇವರನ್ನು ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಯಿತು. ಆರ್ಥಿಕ ತಜ್ಞ ಆರ್.ಎಂ.ಚಿಂತಾಮಣೆ, ರೋಟರಿ ಮಾಜಿ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಮಹಮ್ಮದ್ ಅಜೀಜ್, ರಾಮಸಮುದ್ರ ನಾಗರಾಜು, ರಾಮು, ಸಿ.ವಿ.ಶ್ರೀನಿವಾಸಶೆಟ್ಟಿ, ಅಶ್ವಥ್ ನಾರಾಯಣ್ ಇತರರು ಉಪಸ್ಥಿತರಿದ್ದರು.