ಚಾಮರಾಜನಗರ : ಉಪ್ಪಾರ ಸಮುದಾಯದ ವಿದ್ಯಾಥಿಗಳು ಉನ್ನತ ವ್ಯಾಸಂಗ ಮಾಡುವ ಮೂಲಕ, ಉತ್ತಮ ಹುದ್ದೆಗಳನ್ನು ಪಡೆದುಕೊಳ್ಳುವಂತೆ ಕೇಂದ್ರ ಆದಾಯ ತೆರಿಗೆ ಇಲಾಖೆ ನಿರ್ದೇಶಕ ಲಕ್ಕಪ್ಪ ಹನುಮಣ್ಣನವರ್ ಸಲಹೆ ನೀಡಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜಿಲ್ಲಾ ಉಪ್ಪಾರ ಯುವಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುನಲ್ಲಿ ಶೇ.80ಕ್ಕಿಂತ ಹೆಚ್ಚಿನ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕಾದರೆ, ಮೊದಲು ನಾನೇನಾಗಬೇಕು ಎಂಬುದರ ಬಗ್ಗೆ ಆಲೋಚನೆ ಮಾಡಬೇಕು. ಐಎಎಸ್, ಐಪಿಎಸ್, ಸಿಎ, ಉಪನ್ಯಾಸಕ ವೃತ್ತಿಯ ಬಗ್ಗೆ ಆಸಕ್ತಿ ಹೊಂದಿದ್ದರೆ ಅದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಓದಿದ ನಂತರ ಎಲ್ಲವನ್ನೂ ಮನನ ಮಾಡಿಕೊಳ್ಳಬೇಕು. ದಿನಪತ್ರಿಕೆ ಹಾಗೂ ವೃತ್ತಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಬಳಕೆಗೆ ಆದಷ್ಟು ಕಡಿವಾಣ ಹಾಕಿ, ವಿದ್ಯಾರ್ಥಿಗಳು ನಕಾರಾತ್ಮಕ ಯೋಚನೆಗಳನ್ನು ಬಿಟ್ಟು, ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಚಾಮರಾಜನಗರ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಚಿಕ್ಕರಾಜಶೆಟ್ಟಿ ಮಾತನಾಡಿ, ಬಹುತೇಕ ಪಾಲಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಆಸೆ ಹೊಂದಿರುತ್ತಾರೆ. ಅಂತಹ ಯೋಚನೆಗಳನ್ನು ಬಿಟ್ಟು ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಕೆಲಸ ಮಾಡಿ. ಆಗ ಆ ಮಕ್ಕಳು ಸಮಾಜದ ಆಸ್ತಿಯಾಗುತ್ತಾರೆ ಎಂದು ತಿಳಿಸಿದರು.
ಉಪ್ಪಾರ ಸಮುದಾಯ 60 ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು. ಬಳಿಕ ಸಮುದಾಯದ ವಿವಿಧ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಗೌರವಿಸಲಾಯಿತು. ಐಟಿಐ ಕಾಲೇಜು ಪ್ರಾಂಶುಪಾಲ ರಂಗಸ್ವಾಮಿ, ಕೆಇಬಿ ಲೆಕ್ಕಾಧಿಕಾರಿ ಮಹೇಶ್, ಡೇರಿ ಅಧ್ಯಕ್ಷ ಕೋಡಿಮೋಳೆ ಗೋವಿಂದಶೆಟ್ಟಿ, ಸಂಘದ ಅಧ್ಯಕ್ಷ ಜಯಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗರಾಜು, ಉಪಾಧ್ಯಕ್ಷ ಬಿ.ಸ್ವಾಮಿ, ರವಿ ಭಗೀರಥ, ಜಯಸಿದ್ದ, ಮಹದೇವಸ್ವಾಮಿ, ಶಿವಕುಮಾರ್, ನಿಟ್ರೆ ನಾಗರಾಜು, ಮೇಗಲಹುಂಡಿ ಮಹೇಶ್ ಉಪಸ್ಥಿತರಿದ್ದರು.