ಚಾಮರಾಜನಗರ: ಜಿಲ್ಲೆಯಲ್ಲಿ 26 ಡೆಂಘೆ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಡೆಂಘೆ ಜ್ವರವನ್ನು ತಡೆಗಟ್ಟೋಣ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಏಪ್ರಿಲ್ ಅಂತ್ಯದವರೆಗೆ 26 ಡೆಂಘೆ ಪ್ರಕರಣ ಕಾಣಿಸಿಕೊಂಡಿದೆ. ಚಾ.ನಗರದಲ್ಲಿ 14, ಕೊಳ್ಳೇಗಾಲ ಮತ್ತು ಹನೂರಿನಲ್ಲಿ 10 ಹಾಗೂ ಗುಂಡ್ಲುಪೇಟೆ ಮತ್ತು ಯಳಂದೂರಿನಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಮಳೆಯಾಗಿರುವುದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಈಗಾಗಿ ಡೆಂಘೆ ಜ್ವರವು ಅಧಿಕವಾಗಿದೆ. ಎಲ್ಲಿ ನೀರು ನಿಂತಿರುತ್ತದೋ ಹಾಗೂ ಸ್ವಚ್ಛತೆ ಇಲ್ಲದ ಕಡೆಗಳಲ್ಲಿ ಇದು ಹೆಚ್ಚಾಗುತ್ತದೆ. ತೀವ್ರತರವಾದ ಜ್ವರ, ವಿಪರೀತ ತಲೆನೋವು, ವಾಂತಿ ಇನ್ನಿತರೆ ಲಕ್ಷಣಗಳು ಕಾಣಿಸಿಕೊಂಡಾಗ ತಕ್ಷಣವೇ ತಪಾಸಣೆ ಮಾಡಿಸಿಕೊಳ್ಳಬೇಕು. ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು. ಅಧಿಕಾರಿಗಳು ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಸಹಕಾರವನ್ನು ಪಡೆದುಕೊಂಡು ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಮನೆಯಲ್ಲಿನ ಸ್ವಚ್ಛ ನೀರಿನ ಸಂಗ್ರಹದಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಈಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಸಾರ್ವಜನಿಕರು ನೋಡಿಕೊಳ್ಳಬೇಕು, ಮನೆಯಲ್ಲಿ ಶೇಖರಿಸಿರುವ ನೀರನ್ನು ವಾರಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು. ಘನತ್ಯಾಜ್ಯ ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಛವಾಗಿಡಬೇಕು. ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಸ್ವಯಂ ಸೇವಕರು ಇಲಾಖೆಯ ಸಲಹೆಗಳನ್ನು ತಪ್ಪದೇ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಪೂವಿತಾ ಮಾತನಾಡಿ, ಡೆಂಘೆ ಜ್ವರ ಹೆಚ್ಚಾದರೆ ನಿಯಂತ್ರಣ ಮಾಡುವುದು ಕಷ್ಟವಾಗುತ್ತದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆಮನೆಗೆ ತೆರಳಿ ಸ್ವಚ್ಛತೆಯ ಬಗ್ಗೆ, ಸೊಳ್ಳೆ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇದರ ಜತೆಯಲ್ಲಿ ಸಾರ್ವಜನಿಕರು ಕೂಡ ಹೆಚ್ಚಿನ ಜಾಗೃತಿ ವಹಿಸಬೇಕು. ಮಾನ್ಸೂನ್ ಮಳೆ ಪ್ರಾರಂಭವಾಗುವ ಈ ಸಂದರ್ಭದಲ್ಲಿ ಡೆಂೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮ ಆಯೋಜಿಸುವುದು ಸೂಕ್ತವಾಗಿದೆ. ಎಲ್ಲ ಸಂಘ ಸಂಸ್ಥೆಗಳ ಜತೆಗೆ ಆರೋಗ್ಯ ಇಲಾಖೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ. ವಿಶ್ವೇಶ್ವರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಂತರಾಜ್ ಹಾಗೂ ಇತರರು ಉಪಸ್ಥಿತರಿದ್ದರು.