ಯಳಂದೂರು: ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಯರಿಯೂರು ಗ್ರಾಮದ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಸಾವಿಗೆ ಕಾಡುಪ್ರಾಣಿ ದಾಳಿಯೇ ಕಾರಣವಾಗಿದ್ದು, ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು, ಪಾಲಕರು ಪಟ್ಟಣದ ಅರಣ್ಯ ಇಲಾಖೆ ಕಚೇರಿ ಎದುರು ಶವವಿಟ್ಟು ಗುರುವಾರ ಪ್ರತಿಭಟನೆ ನಡೆಸಿದರು.
ಯರಿಯೂರು ಗ್ರಾಮದ ನಾಯಕರ ಬಡಾವಣೆಯ ವಸಂತ ಹಾಗೂ ಆನಂದ್ ಎಂಬುವರ ಪುತ್ರಿ ರುಕ್ಮಿಣಿ(3) ಆ. 14ರಂದು ಸುವರ್ಣಾವತಿ ನದಿ ದಡದಲ್ಲಿರುವ ತೋಟದ ಬಳಿ ಆಟವಾಡುತ್ತಿದ್ದಳು. ಈ ವೇಳೆ ಕಾಡುಪ್ರಾಣಿಯೊಂದು ದಾಳಿ ನಡೆಸಿ ಬಾಲಕಿಯ ತಲೆಯ ಭಾಗದ ಚರ್ಮವನ್ನು ಕೂದಲು ಸಮೇತ ಕಿತ್ತು ಹಾಕಿತ್ತು. ಜತೆಗೆ ಕಾಲು, ಗಲ್ಲವನ್ನೂ ಕಚ್ಚಿ ಗಾಯಗೊಳಿಸಿತ್ತು. ಕೂಡಲೇ ಆಕೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರ ಸಲಹೆಯಂತೆ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ಗ್ರಾಮಸ್ಥರು, ಪಾಲಕರು ಆರೋಪಿಸಿದರು.
ಮುಗಿಲು ಮುಟ್ಟಿದ ಆಕ್ರಂದನ:
ಬಾಲಕಿಯ ಶವವನ್ನು ಆಂಬುಲೆನ್ಸ್‌ನಲ್ಲಿ ಪ್ರತಿಭಟನಾ ಸ್ಥಳಕ್ಕೆ ತರುತ್ತಿದ್ದಂತೆಯೇ ಪಾಲಕರ ಆಕ್ರಂದನ ಮುಗಿಲು ಮುಟ್ಟಿತು. ಪಾಲಕರು ಶವವನ್ನು ತೊಡೆಯ ಮೇಲಿಟ್ಟುಕೊಂಡು ಚೀರಾಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು. ಸ್ಥಳದಲ್ಲಿದ್ದ ಸಾರ್ವಜನಿಕರು ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರಗಳನ್ನು ಕೂಗಿ ಪ್ರತಿಭಟಿಸಿದರು.
ಡಿಎಫ್‌ಒ ಬರುವಂತೆ ಪಟ್ಟು:
ಸ್ಥಳಕ್ಕೆ ಡಿಎಫ್‌ಒ ಬರುವಂತೆ ಆಗ್ರಹಿಸಿ ಸಾರ್ವಜನಿಕರು ಸಂಜೆಯವರೆಗೂ ಪ್ರತಿಭಟನೆ ನಡೆಸಿದರು. ಅಲ್ಲದೆ, ಇಲಾಖೆಯಿಂದ ಪರಿಹಾರ ನೀಡಬೇಕು ಎಂದು ಪಟ್ಟುಹಿಡಿದರು. ಶಾಸಕರ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ, ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಎನ್. ಮಹೇಶ್, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯಕ ಭೇಟಿ ನೀಡಿ ಪ್ರತಿಭಟನಾನಿರತರೊಂದಿಗೆ ಮಾತನಾಡಿದರು.
50 ಸಾವಿರ ರೂ. ಪರಿಹಾರ:ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅರಣ್ಯ ಇಲಾಖೆಯಿಂದ ಸ್ಥಳದಲ್ಲೇ 50 ಸಾವಿರ ರೂ. ಪರಿಹಾರ ಕೊಡಿಸಿದರು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಉಳಿದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಅಲ್ಲದೆ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಪರಿಹಾರ ಕೊಡಿಸುವುದಾಗಿ ಆಶ್ವಾಸನೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಬೀದಿ ನಾಯಿಗಳ ದಾಳಿ ಎಂದ ಅರಣ್ಯ ಇಲಾಖೆ
ಬಾಲಕಿ ಸಾವಿಗೆ ಕಾಡುಪ್ರಾಣಿ ಕಾರಣವಲ್ಲ. ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿಕೆ ನೀಡಿದ್ದರು. ಆದರೆ ಕಾಡುಪ್ರಾಣಿ ದಾಳಿ ನಡೆಸಿರಬಹುದೆಂದು ಚಾಮರಾಜನಗರ ಜಿಲ್ಲಾಸ್ಪತ್ರೆಯ ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಒಪ್ಪುತ್ತಿಲ್ಲ. ಈ ಭಾಗದಲ್ಲಿ ಚಿರತೆ, ಸೀಳುನಾಯಿಗಳು ಓಡಾಡುತ್ತಿರುತ್ತವೆ. ಹಾಗಾಗಿ, ಬಾಲಕಿ ಮೇಲೆ ಕಾಡುಪ್ರಾಣಿಯೇ ದಾಳಿ ಮಾಡಿದೆ ಎಂಬುದು ಗ್ರಾಮಸ್ಥರ ಪ್ರತಿಪಾದನೆಯಾಗಿದೆ.
ಹೆಚ್ಚಾದ ಕಾಡುಪ್ರಾಣಿಗಳ ಉಪಟಳ
ಇತ್ತೀಚೆಗೆ ತಾಲೂಕಿನ ಕೆಸ್ತೂರು, ಮಲ್ಲಿಗೆಹಳ್ಳಿ, ಕಿನಕಹಳ್ಳಿ, ಕಟ್ನವಾಡಿ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕುಂತೂರು ಗುಡ್ಡದಲ್ಲಿ ಸೆರೆ ಹಿಡಿದಿದ್ದರು. ಇದಾದ ಬಳಿಕ ಅಂಬಳೆ, ಚಂಗಚಹಳ್ಳಿ, ವೈ.ಕೆ. ಮೋಳೆ ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅದನ್ನು ಸೆರೆ ಹಿಡಿಯಲು ಬೋನು ಇರಿಸಲಾಗಿತ್ತು. ಆದರೂ ಚಿರತೆ ಸೆರೆ ಸಿಕ್ಕಿಲ್ಲ. ಈಗ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಸಾರ್ವಜನಿಕರು ಭಯದಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಸ್ಥಳದಲ್ಲಿ ಎಸಿಎಫ್ ಸುರೇಶ್, ಆರ್‌ಎಫ್‌ಒ ಲೋಕೇಶ್‌ಮೂರ್ತಿ, ಡಿವೈಎಸ್‌ಪಿ ಸೋಮೇಗೌಡ, ಸಿಪಿಐ ಶಿವರಾಜ್ ಮುಧೋಳ್, ಪಿಎಸ್‌ಐ ಚಂದ್ರಹಾಸ್ ಇದ್ದರು.