ಚಾಮರಾಜನಗರ: ಶತಮಾನಗಳ ಹಿಂದೆ ಛಿದ್ರವಾದ ಕುರುಹುಗಳನ್ನು ಒಟ್ಟಾಗಿಸಿ ನಿರ್ಮಿಸಿದ ದೇಗುಲದಲ್ಲಿ ನೆಲೆಸಿರುವ ಮಾರಮ್ಮ ಭಕ್ತಾದಿಗಳ ಕಷ್ಟ ಕಾರ್ಪಣ್ಯ ನಿವಾರಿಸುತ್ತಾಳೆ.
ತಾಲೂಕಿನ ಆಲೂರು ಮತ್ತು ಕೂಡ್ಲೂರು ಗ್ರಾಮಗಳ ನಡುವೆ ಇರುವ, ಈ ಹಿಂದೆ ಹೊಸಹಳ್ಳಿ ಗ್ರಾಮ ಎಂದು ಕರೆಯಲ್ಪಡುತ್ತಿದ್ದ ಸ್ಥಳದಲ್ಲಿ 12 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಹೊಸಳ್ಳಿ ಮಾರಮ್ಮ ದೇವಸ್ಥಾನದಲ್ಲಿ ತ್ರಿಪುರಾಂಬದೇವಿಯ ಶಕ್ತಿ ನೆಲೆಸಿದ್ದು ಭಕ್ತಾದಿಗಳ ಪಾಲಿನ ಆರಾಧ್ಯ ದೈವವಾಗಿದ್ದಾಳೆ.
ಸುಮಾರು 500-600 ವರ್ಷಗಳ ಹಿಂದೆ ಸುವರ್ಣಾವತಿ ಹೊಳೆ ದಂಡೆಯಲ್ಲಿ ಇದ್ದ ಹೊಸಹಳ್ಳಿ ಗ್ರಾಮ ಕಾಲಾನಂತರ ನಾಶವಾಗಿತ್ತು. 12 ವರ್ಷಗಳ ಹಿಂದೆ ಸಾಕಷ್ಟು ಕುರುಹುಗಳು, ಶಿಲಾ ಶಾಸನಗಳು, ವಿಗ್ರಹಗಳು ಇನ್ನಿತರ ವಸ್ತುಗಳು ಪತ್ತೆಯಾಗಿದ್ದವು. ಇದನ್ನು ಅರಿತ ಆಲೂರು ಗ್ರಾಮದ ಕೆಲವು ಕುಟುಂಬಗಳು ತಮ್ಮ ಪೂರ್ವಿಕರು ನೆಲೆಸಿದ್ದ ಸ್ಥಳದಲ್ಲೇ ಹೊಸಳ್ಳಿ ಮಾರಮ್ಮನ ದೇವಸ್ಥಾನ ನಿರ್ಮಾಣ ಮಾಡಿವೆ. ಅಲ್ಲಿ ಅರ್ಚಕರನ್ನು ನೇಮಿಸಿ ಪ್ರತಿ ಮಂಗಳವಾರ ಹಾಗೂ ಹಬ್ಬದ ದಿನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಆಲೂರು ಗ್ರಾಮವಲ್ಲದೇ ಕೂಡ್ಲೂರು, ಹಂಡರಕಳ್ಳಿ ಮೋಳೆ, ಮಾದಾಪುರ, ಮಂಗಲ ಗ್ರಾಮಗಳಿಂದಲೂ ಸಾಕಷ್ಟು ಭಕ್ತರು ಬರುತ್ತಾರೆ. ಹೊರ ರಾಜ್ಯದಿಂದಲೂ ಇಲ್ಲಿಗೆ ಬಂದು ಹರಕೆ ಕಟ್ಟಿಕೊಳ್ಳುವ ವಾಡಿಕೆ ಇದೆ. ದೇವಾಲಯದ ಮುಂದೆಯೇ ಇರುವ ಬೇವಿನ ಮರಕ್ಕೆ ಕಾಣಿಕೆ ಕಟ್ಟಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ವಿಶೇಷ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳ ದಂಡೇ ಹರಿದು ಬರುತ್ತದೆ. ಐತಿಹಾಸಿಕ ಕುರುಹುಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಶ್ರೀ ಹೊಸಹಳ್ಳಿ ಮಾರಮ್ಮ ಶಕ್ತಿ ದೇವತೆ ಎಂದೇ ಹೆಸರುವಾಸಿಯಾಗಿದ್ದು, ಭಕ್ತರ ಪಾಲಿಗೆ ಬೇಡಿದ ವರಗಳನ್ನು ಕರುಣಿಸೋ ದೈವವಾಗಿದ್ದಾಳೆ. ಹೊಸಳ್ಳಿ ಮಾರಮ್ಮ ಬಹಳ ಶಕ್ತಿದೇವತೆಯಾಗಿದ್ದು, ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಭಕ್ತರು ಬೇಡಿಕೊಂಡಿದ್ದು ನೆರವೇರಿದೆ. ಈ ಸ್ಥಳದಲ್ಲಿ ಪೂರ್ವಿಕರು ವಾಸವಾಗಿದ್ದ ಕಾರಣಕ್ಕೆ ಹಲವು ಸಮುದಾಯಗಳ ಜನರಿಗೂ ಈ ದೇವರು ಮನೆ ದೇವರಾಗಿದ್ದಾಳೆ. ಈಗ ದೇವಾಲಯ ನಿರ್ಮಾಣವಾಗಿರುವ ಸ್ಥಳದ ಸುತ್ತಮುತ್ತಲೂ 50-60 ಎಕರೆ ಜಮೀನು ಇದ್ದು, ಈ ಹಿಂದೆ ಯಾರು ಕೂಡ ಹೋಗುತ್ತಿರಲಿಲ್ಲ. ಆದರೆ, ದೇವಾಲಯ ನಿರ್ಮಾಣ ಮಾಡಿದ ಮೇಲೆ ಎಲ್ಲರೂ ಜಮೀನು ಮಾಡುತ್ತಿದ್ದಾರೆ. ಮಾರಮ್ಮನಾದರೂ ಮಾಂಸಾಹಾರ ನಿಷೇಧವಿದ್ದು, ಹತ್ತಿರದ ಜಮೀನಿನಲ್ಲಿ ಇರುವವರು ಕೂಡ ಮಾಂಸಾಹಾರ ಸೇವಿಸಿದರೆ ದೇವಾಲಯದ ಬಳಿ ಹೋಗುವುದಿಲ್ಲ. ಈ ಕಾರಣಕ್ಕೆ ಹೊಸಹಳ್ಳಿ ಮಾರಮ್ಮನಿಗೆ ತ್ರಿಪುರಸುಂದರಿ ಎಂದು ಕರೆಯುವುದುಂಟು.
ಐತಿಹಾಸಿಕ ಕುರುಹು: ದೇವಾಲಯ ಇರುವ ಸ್ಥಳದಲ್ಲಿ 12 ವರ್ಷಗಳ ಹಿಂದೆ ಸಾಕಷ್ಟು ಐತಿಹಾಸಿಕ ಕುರುಹುಗಳು ಪತ್ತೆಯಾಗಿತ್ತು. ಸುಮಾರು 500-600 ವರ್ಷಗಳ ಹಿಂದಿನ ಗಣಪತಿ, ವೀರಭದ್ರೇಶ್ವರ, ಶನೈಶ್ಚರ, ಸುಬ್ರಹ್ಮಣ್ಯಸ್ವಾಮಿ, ನಾಗರದೇವತೆಯ ಕಲ್ಲಿನ ವಿಗ್ರಹಗಳು ಪತ್ತೆಯಾಗಿವೆ. ಮಡಕೆ, ಕಬ್ಬಿಣದ ಚೂರುಗಳು ದೊರೆತಿವೆ. ಅಲ್ಲದೇ ಕೆಲವು ಶಿಲಾಶಾಸನಗಳು ದೊರೆತಿದ್ದು, ಲಿಪಿ ತಜ್ಞರು ಹಾಗೂ ಇತಿಹಾಸಕಾರರು ಭೇಟಿ ನೀಡಿ ಪರಿಶೀಲನೆ ನಡೆಸಿದರೆ ಐತಿಹಾಸಿಕ ಮಾಹಿತಿ ಲಭ್ಯವಾಗಬಹುದು. ಈ ಹಿಂದೆ ಮಾರಮ್ಮನ ವಿಗ್ರಹವನ್ನು ಪೂಜೆ ಮಾಡಲಾಗುತ್ತಿತ್ತು. ಈಗ ಸುಂದರವಾದ ದೇವಾಲಯವನ್ನು ನಿರ್ಮಿಸಿದ ನಂತರ ಸಾಕಷ್ಟು ಭಕ್ತರು ಬರುತ್ತಿದ್ದು ಪ್ರತಿ ಮಂಗಳವಾರ ವಿಶೇಷ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ.
ಕೇರಳಕ್ಕೂ ನಂಟು: ಹೊಸಹಳ್ಳಿ ಮಾರಮ್ಮನ ದೇವಸ್ಥಾನ ನಿರ್ಮಾಣವಾಗುವುದಕ್ಕೂ ಮುಂಚೆ ಕೇರಳ ರಾಜ್ಯ ಅರ್ಚಕರಾದ ಉನ್ನಿಕೃಷ್ಣನ್ ಎಂಬುವರು ಇಲ್ಲಿಗೆ ಭೇಟಿ ನೀಡಿದ್ದರು. ಈ ಜಾಗದಲ್ಲಿ ಹಿಂದೆ ಮಾರಮ್ಮನ ಒಂದು ದೇವಸ್ಥಾನ ಇತ್ತು ಎಂದು ಹೇಳಿ, ವಿಗ್ರಹ ಪತ್ತೆಯಾಗಿ ಇಲ್ಲಿ ದೇವಸ್ಥಾನ ನಿರ್ಮಾಣ ಮಾಡುವಂತೆ ಕೇಳಿಕೊಂಡಿದ್ದರು. ಸುತ್ತಲಿನ ಗ್ರಾಮದಲ್ಲಿರುವ ಹಲವು ಮಾರಮ್ಮನ ವಂಶಸ್ಥರು ದೇವಾಲಯ ನಿರ್ಮಾಣಕ್ಕೆ ಮುಂದಾದರು. ಪ್ರತಿವರ್ಷ ೆಬ್ರವರಿ ತಿಂಗಳಲ್ಲಿ ನಡೆಯಲಿರುವ ವಿಶೇಷ ಜಾತ್ರಾ ಮಹೋತ್ಸವದಲ್ಲಿ ಉನ್ನಿಕೃಷ್ಣನ್ ಭಾಗವಹಿಸಿ ಹೋಮ- ಹವನ ಮಾಡುತ್ತಾರೆ. ಈ ಕಾರಣಕ್ಕೆ ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ ಎಂಬುದು ವಿಶೇಷ.
ಪುರಾಣ ಹೇಳುವುದೇ ಬೇರೆ: ಮೈಸೂರು ಜಿಲ್ಲೆಯ ಹೊಸಹಳ್ಳಿ ಗ್ರಾಮ ದೇವತೆ ಇದಾಗಿದ್ದು, ಕಾಲಾನಂತರ ಕೆಲವು ಪೂರ್ವಿಕರು ಈಗ ದೇವಾಲಯ ಇರುವ ಸುವರ್ಣಾವತಿ ನದಿ ತಪ್ಪಲಿನಲ್ಲಿ ಬಂದು ನೆಲೆಸಿದರು ಎಂಬುದು ಕಥೆ. ಸಾಕಷ್ಟು ವರ್ಷಗಳ ಕಾಲ ಇಲ್ಲಿ ನೆಲೆ ನಿಂತು ಸುವರ್ಣಾವತಿ ಪ್ರವಾಹದಿಂದ ತಪ್ಪಿಸಿಕೊಳ್ಳಲು ಆಲೂರು ಗ್ರಾಮದಲ್ಲಿ ಬಂದು ನೆಲೆಸಿದ್ದಾರೆ ಎಂದು ಹಿರಿಯರು ಹೇಳುತ್ತಾರೆ. ಎಲ್ಲಿಗೇ ಹೋದರು ಕೂಡ ಹೊಸಹಳ್ಳಿ ಮಾರಮ್ಮ ತನ್ನ ಇರುವಿಕೆಯನ್ನು ಕಳೆದುಕೊಂಡಿಲ್ಲ. ಈ ಕಾರಣಕ್ಕೆ ಗುಡಿ ಕಟ್ಟಿಸಿಕೊಂಡು ಪೂಜೆ ಮಾಡಿಸಿಕೊಳ್ಳುತ್ತಿದ್ದಾಳೆ ಎಂದು ದೇವಾಲಯಕ್ಕೆ ನಿರ್ಮಾಣಕ್ಕೆ ಶ್ರಮಿಸಿದ ನಾಗೇಶ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಸುಮಾರು 8 ತಲೆಮಾರುಗಳಿಂದ ಹೊಸಹಳ್ಳಿ ಮಾರಮ್ಮನನ್ನು ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಹೊಸಹಳ್ಳಿ ಮಾರಮ್ಮ ಬಹಳ ಶಕ್ತಿದೇವರಾಗಿದ್ದು, ವರ್ಷ ವರ್ಷಕ್ಕೂ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ.> ನಾಗೇಶ್, ಹೊಸಹಳ್ಳಿ ಮಾರಮ್ಮ ಒಕ್ಕಲಿನವರು, ಆಲೂರು, ಚಾಮರಾಜನಗರ ದೇವಾಲಯದ ಸುತ್ತಲೂ ಇಂದಿಗೂ ಅನೇಕ ಕುರುಹುಗಳು ದೊರೆಯುತ್ತವೆ. ವೀರಭದ್ರೇಶ್ವರ ಕಲ್ಲಿನ ವಿಗ್ರಹ ಇದು ಐತಿಹಾಸಿಕ ಸ್ಥಳವಾಗಿತ್ತು ಎಂಬುದನ್ನು ತೋರುತ್ತದೆ. ಹೊಸಳ್ಳಿ ಮಾರಮ್ಮ ಸಾಕಷ್ಟು ವಿಶೇಷತೆಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದ್ದಾಳೆ.ಆರ್.ಪ್ರೀತಮ್, ನಿವಾಸಿ, ಆಲೂರು, ಚಾಮರಾಜನಗರ